ಚೆನ್ನೈ (ತಮಿಳುನಾಡು):ರಾಮನಾಥಪುರಂನಲ್ಲಿ ಬಾಲಕಿಯರು ಮರಳಿನಲ್ಲಿ ಆಟವಾಡುತ್ತಿದ್ದಾಗ 1000 ವರ್ಷಗಳಷ್ಟು (ಕ್ರಿ.ಶ. 985-1012) ಹಳೆಯದಾದ ಒಂದನೇ ರಾಜರಾಜಚೋಳನ ಕಾಲದ ನಾಣ್ಯಗಳು ಪತ್ತೆಯಾಗಿವೆ.
ರಾಮನಾಥಪುರಂನ ತಿರುಪುಲ್ಲಾಣಿ ಸುರೇಶ್ ಸುಧಾ ಅಳಗನ್ ಮೆಮೋರಿಯಲ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಕೆ ಮಣಿಮೇಗಲೈ, ಎಸ್ ದಿವ್ಯದರ್ಶಿನಿ ಮತ್ತು ಎಸ್ ಕಾನಿಷ್ಕಶ್ರೀ ಎಂಬ ಮೂವರು ವಿದ್ಯಾರ್ಥಿಗಳು ಇವುಗಳನ್ನು ಪತ್ತೆ ಮಾಡಿದ್ದಾರೆ.
ರಾಜರಾಜಚೋಳನ ಕಾಲದ ನಾಣ್ಯಗಳು (ETV Bharat) ಮಕ್ಕಳು ಆಟವಾಡುತ್ತಿದ್ದಾಗ ಈ ನಾಣ್ಯಗಳು ಪತ್ತೆಯಾಗಿದ್ದು, ಅಚ್ಚರಿಗೊಂಡು ಶಿಕ್ಷಕರಿಗೆ ತಿಳಿಸಿದ್ದಾರೆ. ಶಿಕ್ಷಕರು ಈ ಸುದ್ದಿಯನ್ನು ಪುರಾತತ್ವ ಇಲಾಖೆಗೆ ತಿಳಿಸಿದ್ದರು. ಶಿಕ್ಷಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪುರಾತತ್ವ ಪರಿಷತ್ತಿನ ಕಾರ್ಯದರ್ಶಿ ಹಾಗೂ ರಾಮನಾಥಪುರಂನ ಪುರಾತತ್ವ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ವಿ.ರಾಜಗುರು ನಾಣ್ಯಗಳು ದೊರೆತಿರುವುದನ್ನು ಖಚಿಪಡಿಸಿದ್ದಾರೆ.
ನಾಣ್ಯ ಜೊತೆಗೆ ಪತ್ತೆಯಾದ ಚೀನಾದ ಪಿಂಗಾಣಿ, ಮಡಿಕೆ ಚೂರು, ಕಬ್ಬಿಣದ ಅದಿರು. (ETV Bharat) ಈ ನಾಣ್ಯದಲ್ಲಿರುವ ವಿಶೇಷತೆಗಳೇನು?:ನಾಣ್ಯ ಮತ್ತು ಪತ್ತೆಯಾದ ಸ್ಥಳವನ್ನು ಖುದ್ದಾಗಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ವಾರದ ಹಿಂದೆ ವಿದ್ಯಾರ್ಥಿಗಳು ಆಟವಾಡುತ್ತಾ ಗುಂಡಿ ತೋಡುತ್ತಿದ್ದರು. ಅವರು ತೋಡಿದ ಗುಂಡಿಯಲ್ಲಿ ಈ ನಾಣ್ಯ ಸಿಕ್ಕಿದೆ. ಈ ನಾಣ್ಯದ ಮೇಲೆ ರಾಜರಾಜಚೋಳನ ಹೆಸರನ್ನು ಕೆತ್ತಲಾಗಿದೆ. ಚೀನಾದ ಪಿಂಗಾಣಿ, ಮಡಿಕೆಗಳು, ಕಬ್ಬಿಣದ ಅದಿರು ಮತ್ತು ಕೆಂಪು ಮಡಿಕೆಗಳು ಸಹ ಪತ್ತೆಯಾಗಿವೆ. ನಾಣ್ಯದ ಒಂದು ಬದಿಯಲ್ಲಿ ಒಬ್ಬ ವ್ಯಕ್ತಿ ಕೈಯಲ್ಲಿ ಹೂವನ್ನು ಹಿಡಿದು ನಿಂತಿರುವಂತೆ ಕಾಣುತ್ತದೆ. ಅವನ ಎಡಭಾಗದಲ್ಲಿ ನಾಲ್ಕು ವೃತ್ತಗಳಿವೆ. ಅವನ ಮೇಲೆ ಅರ್ಧಚಂದ್ರಾಕಾರವಿದೆ. ಬಲಭಾಗದಲ್ಲಿ ತ್ರಿಶೂಲ ಮತ್ತು ದೀಪವಿದೆ. ನಾಣ್ಯದ ಇನ್ನೊಂದು ಬದಿಯಲ್ಲಿ, ಕೈಯಲ್ಲಿ ಶಂಖದೊಂದಿಗೆ ಕುಳಿತಿರುವ ವ್ಯಕ್ತಿಯನ್ನು ಕಾಣಬಹುದು. "ಶ್ರೀರಾಜರಾಜ" ಎಂಬ ಹೆಸರನ್ನು ದೇವನಾಗರಿ ಲಿಪಿಯಲ್ಲಿ ಅವನ ಎಡಗೈಯಲ್ಲಿ ಮೂರು ಸಾಲುಗಳಲ್ಲಿ ಕೆತ್ತಲಾಗಿದೆ. ನಾಣ್ಯದ ಅಂಚುಗಳು ಸವೆದುಹೋಗಿವೆ. ಮೊದಲ ರಾಜರಾಜ ಚೋಳನು ಶ್ರೀಲಂಕಾವನ್ನು ವಶಪಡಿಸಿಕೊಂಡ ನೆನಪಿಗಾಗಿ ಚಿನ್ನ, ಬೆಳ್ಳಿ ಮತ್ತು ತಾಮ್ರದಲ್ಲಿ ಈಳಂ ಎಂಬ ನಾಣ್ಯಗಳನ್ನು ಬಿಡುಗಡೆ ಮಾಡಿರುವುದು ಇತಿಹಾಸಲ್ಲಿ ಉಲ್ಲೇಖವಿದೆ. ಅಲ್ಲದೇ ಈ ನಾಣ್ಯಗಳನ್ನು ಶ್ರೀಲಂಕಾ ಸೇರಿದಂತೆ ಚೋಳರು ಆಳಿದ ದೇಶಗಳಲ್ಲಿ ಚಲಾವಣೆಯಲ್ಲಿತ್ತು. ಈ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ತಾಮ್ರದ ನಾಣ್ಯ. ಪಿರಿಯಾಪಟ್ಟಣಂ, ತೊಂಡಿ, ಕಲಿಮಂಕುಂಡು, ಅಲಗಂಕುಲಂ ಮತ್ತು ಕರಾವಳಿ ಪ್ರದೇಶಗಳಲ್ಲಿ ಈಳಂ ನಾಣ್ಯಗಳು ದೊರೆತಿವೆ'' ಎಂದು ಅವರು ಹೇಳಿದರು.
ನಾಣ್ಯ ಪತ್ತೆ ಮಾಡಿದ ವಿದ್ಯಾರ್ಥಿಗಳು (ETV Bharat) ಪುರಾತನ ನಾಣ್ಯ ಪತ್ತೆ ಹಚ್ಚಿ ಸುರಕ್ಷಿತವಾಗಿ ಹಸ್ತಾಂತರಿಸಿದ ವಿದ್ಯಾರ್ಥಿಗಳನ್ನು ಶಾಲೆಯ ಪ್ರಾಂಶುಪಾಲ ಮಹೇಂದ್ರನ್ ಕಣ್ಣನ್ ಹಾಗೂ ಶಿಕ್ಷಕರು ಶ್ಲಾಘಿಸಿದರು. ಚಟುವಟಿಕೆಗಳ ಭಾಗವಾಗಿ ವಿದ್ಯಾರ್ಥಿಗಳಿಗೆ ಪ್ರಾಚೀನ ಕಾಲದ ನಾಣ್ಯ, ಮಡಕೆ ಚೂರುಗಳನ್ನು ಗುರುತಿಸಲು ಮತ್ತು ಶಾಸನಗಳನ್ನು ಓದಲು ಇಲ್ಲಿ ತರಬೇತಿ ನೀಡಲಾಗುತ್ತದೆ.
ಇದನ್ನೂ ಓದಿ:ಅಯ್ಯೋ 'ನನ್ನನ್ನೇಕೆ ದೂರ ಮಾಡಿದ್ದೀರಿ: ದಯವಿಟ್ಟು ನನ್ನನ್ನು ಸ್ವಲ್ಪ ಬಳಸಿ' 10 ರೂ ನಾಣ್ಯದ ಕಥೆ -ವ್ಯಥೆ - WHAT SAYS RBI ABOUT 10Rs COIN