ಕರ್ನಾಟಕ

karnataka

ETV Bharat / bharat

ಸುಪ್ರೀಂ ಕೋರ್ಟ್​ನಲ್ಲಿ ತಿರುಪತಿ ಲಡ್ಡು ಕಲಬೆರಕೆ ಕೇಸ್​: ತನಿಖೆ ನಿಲ್ಲಿಸಿದ SIT - Tirupati Laddu Adulteration Case - TIRUPATI LADDU ADULTERATION CASE

ತಿರುಪತಿ ಲಡ್ಡು ಕಲಬೆರಕೆ ಪ್ರಕರಣವನ್ನು ಸುಪ್ರೀಂ ಕೋರ್ಟ್​ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಹೀಗಾಗಿ ಆಂಧ್ರ ಪ್ರದೇಶ ಸರ್ಕಾರ ರಚಿಸಿದ್ದ ಎಸ್​​ಐಟಿ ತನ್ನ ತನಿಖೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.

ತಿರುಪತಿ ಲಡ್ಡು ಕಲಬೆರಕೆ ಕೇಸ್​
ತಿರುಪತಿ ಲಡ್ಡು ಕಲಬೆರಕೆ ಪ್ರಕರಣ (ETV Bharat)

By PTI

Published : Oct 1, 2024, 4:15 PM IST

ತಿರುಪತಿ (ಆಂಧ್ರ ಪ್ರದೇಶ):ತಿರುಪತಿ ಲಡ್ಡು ಕಲಬೆರಕೆ ಪ್ರಕರಣವನ್ನು ಸುಪ್ರೀಂ ಕೋರ್ಟ್​ ವಿಚಾರಣೆ ನಡೆಸುತ್ತಿದೆ. ಹೀಗಾಗಿ, ಪ್ರಕರಣದ ತನಿಖೆ ನಡೆಸಲು ಆಂಧ್ರ ಪ್ರದೇಶ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ಚಟುವಟಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆಂಧ್ರ ಪ್ರದೇಶ ಡಿಜಿಪಿ ಸಿ.ಎಚ್.ದ್ವಾರಕಾ ತಿರುಮಲರಾವ್, "ತಿರುಪತಿ ಲಡ್ಡು ಕಲಬೆರಕೆ ಪ್ರಕರಣ ಈಗ ಸುಪ್ರೀಂ ಕೋರ್ಟ್​ ಅಂಗಳದಲ್ಲಿದೆ. ಸಲ್ಲಿಕೆಯಾದ ಅರ್ಜಿಗಳನ್ನು ಕೋರ್ಟ್​ ಸೋಮವಾರ ವಿಚಾರಣೆ ನಡೆಸಿದೆ. ಹೀಗಾಗಿ ಪ್ರಕರಣದ ವಿಚಾರಣೆ ನಡೆಸಲು ಸರ್ಕಾರ ರಚಿಸಿದ್ದ ಎಸ್​​ಐಟಿ ತನಿಖೆಯನ್ನು ಸ್ಥಗಿತಗೊಳಿಸಿದೆ" ಎಂದರು.

ತನಿಖೆಯ ಭಾಗವಾಗಿ ಎಸ್​​ಐಟಿ ಲಡ್ಡುವಿಗೆ ಬಳಸಲಾಗುವ ತುಪ್ಪ ಮತ್ತಿತರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿತ್ತು. ಲಡ್ಡುಗಳನ್ನು ಕಲಬೆರಕೆ ಮಾಡಲು ಹೇಗೆ ಸಾಧ್ಯ? ಎಂಬುದನ್ನು ವಿಚಾರಣೆ ನಡೆಸಿತ್ತು. ಈ ಎಲ್ಲ ವಿದ್ಯಮಾನಗಳ ಮಧ್ಯೆ ಸುಪ್ರೀಂ ಕೋರ್ಟ್​ ಪ್ರಕರಣದ ವಿಚಾರಣೆ ಆರಂಭಿಸಿದೆ. ಹೀಗಾಗಿ ಕೇಸ್​ನ ತನಿಖೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ" ಎಂದು ಮಾಹಿತಿ ನೀಡಿದರು.

"ಸುಪ್ರೀಂ ಕೋರ್ಟ್‌ನ ವ್ಯಾಪ್ತಿಯಲ್ಲಿ ಪ್ರಕರಣದ ಪರಿಶೀಲನೆ ನಡೆಯುತ್ತಿರುವಾಗ, ಈ ಬಗ್ಗೆ ಹೆಚ್ಚು ಮಾಹಿತಿ ಹಂಚಿಕೊಳ್ಳುವುದು ಸೂಕ್ತವಲ್ಲ. ಅಕ್ಟೋಬರ್ 3ರಂದು ಕೋರ್ಟ್‌ನಲ್ಲಿ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ನಂತರದ ಬೆಳವಣಿಗೆಯ ಆಧಾರದ ಮೇಲೆ ಎಸ್​ಐಟಿ ಕ್ರಮ ಕೈಗೊಳ್ಳಲಿದೆ" ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್​ ಬೇಸರ:ತಿರುಪತಿ ಲಡ್ಡು ಕಲಬೆರಕೆ ವಿವಾದದ ಕುರಿತು ಸುಪ್ರೀಂ ಕೋರ್ಟ್​ ಸೋಮವಾರದ ವಿಚಾರಣೆಯಲ್ಲಿ ಬೇಸರ ವ್ಯಕ್ತಪಡಿಸಿತು. ಪವಿತ್ರ ಧಾರ್ಮಿಕ ಕ್ಷೇತ್ರಗಳು, ದೇವರನ್ನು ರಾಜಕೀಯಕ್ಕೆ ಬಳಸಿಕೊಳ್ಳದಂತೆ ರಾಜಕಾರಣಿಗಳಿಗೆ ಸಲಹೆ ನೀಡಿದೆ.

ತಿರುಪತಿ ಲಡ್ಡಿಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣವಾಗಿದೆ ಎಂಬ ಆರೋಪದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ಪೀಠವು ವಿಚಾರಣೆ ನಡೆಸುವ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿತು.

ದೇವರ ವಿಚಾರದಲ್ಲಿ ರಾಜಕೀಯ ಪಕ್ಷಗಳು ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಬೇಸರಿಸಿದ ಕೋರ್ಟ್​, ಕನಿಷ್ಠ ದೇವರುಗಳನ್ನಾದರೂ ರಾಜಕೀಯದಿಂದ ದೂರವಿಡಬೇಕು. ಇದೆಲ್ಲವೂ ಕೋಟ್ಯಂತರ ಭಕ್ತರ ನಂಬಿಕೆಗೆ ಸಂಬಂಧಿಸಿದ ವಿಷಯ ಎಂದಿದೆ.

ಆರೋಪವೇನು?:ಮಾಜಿ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದಲ್ಲಿ ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪವನ್ನು ಬಳಸಲಾಗಿದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದಾರೆ. ಇದನ್ನು ಮಾಜಿ ಸಿಎಂ ಜಗನ್​​ ನಿರಾಕರಿಸಿದ್ದಾರೆ.

ಇದನ್ನೂ ಓದಿ:'ಕನಿಷ್ಠ ದೇವರನ್ನಾದರೂ ರಾಜಕೀಯದಿಂದ ದೂರವಿಡಿ': ತಿರುಪತಿ ಲಡ್ಡು ವಿವಾದದ ಬಗ್ಗೆ ಸುಪ್ರೀಕೋರ್ಟ್​ ಬೇಸರ - Tirupati laddu row

ABOUT THE AUTHOR

...view details