ದಿಂಡಿಗಲ್(ತಮಿಳುನಾಡು): ದಿಂಡುಗಲ್‌ನ ಎಆರ್ ಡೈರಿ ಫುಡ್ ಕಂಪನಿಯಿಂದ ತಿರುಪತಿ ದೇವಸ್ಥಾನಕ್ಕೆ ರವಾನೆಯಾಗುವ ತುಪ್ಪ ಉತ್ತಮ ಗುಣಮಟ್ಟದ್ದಾಗಿದೆ ಎಂದು ಗುಣಮಟ್ಟ ನಿಯಂತ್ರಣಾಧಿಕಾರಿಗಳಾದ ಲೆನಿ ಮತ್ತು ಕಣ್ಣನ್ ಸ್ಪಷ್ಟಪಡಿಸಿದ್ದಾರೆ.
ತಿರುಪತಿ ಲಡ್ಡು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಪ್ರತಿಕ್ರಿಯೆ ನೀಡಿದ ಅವರು, ತಮಿಳುನಾಡಿನ ಪರವಾಗಿ ತುಪ್ಪ ಕಳುಹಿಸಿರುವ ಎಆರ್ ಡೈರಿ ಫುಡ್ ಕಂಪನಿಯ ತುಪ್ಪದಲ್ಲಿ ಯಾವುದೇ ಲೋಪವಿಲ್ಲ. ನಾವು ಜೂನ್‌ನಿಂದ ಜುಲೈವರೆಗೆ ತಿರುಮಲ ತಿರುಪತಿ ದೇವಸ್ಥಾನಗಳಿಗೆ ತುಪ್ಪವನ್ನು ಪೂರೈಸುತ್ತಿದ್ದೇವೆ. ಆದರೆ, ಸದ್ಯ ದೇವಾಸ್ಥಾನಕ್ಕೆ ತುಪ್ಪ ಪೂರೈಕೆಯಾಗುತ್ತಿಲ್ಲ. ಈಗ ನಮ್ಮ ಕಂಪನಿಯ ಉತ್ಪನ್ನದಲ್ಲಿ ದೋಷವಿದೆ ಎಂದು ಹೇಳಲಾಗುತ್ತಿದೆ. ಕಳೆದ 25 ವರ್ಷಗಳಿಂದ ತುಪ್ಪ ಉತ್ಪಾದನೆ ಮಾಡುವ ಉದ್ಯಮದಲ್ಲಿದ್ದೇವೆ. ಇಲ್ಲಿಯವರೆಗೆ ಯಾವುದೇ ದೂರುಗಳು ಕೇಳಿ ಬಂದಿಲ್ಲ ಎಂದರು.
ಎಆರ್ ಡೈರಿ ಫುಡ್ (ETV Bharat) ಗುಣಮಟ್ಟ ನಿಯಂತ್ರಣಾಧಿಕಾರಿಗಳಾದ ಲೆನಿ ಮತ್ತು ಕಣ್ಣನ್ (ETV Bharat) ಶೇ 0.5 ರಷ್ಟು ಕಡಿಮೆ ದರಕ್ಕೆ ನೀಡುತ್ತಿದ್ದೆವು:ನಮ್ಮ ಕಂಪನಿಯ ಉತ್ಪಾದನೆಯ ಶೇ. 0.5 ರಷ್ಟು ಮಾತ್ರ ತಿರುಪತಿ ದೇವಸ್ಥಾನಕ್ಕೆ ಕಳುಹಿಸುತ್ತಿದ್ದೆವು. ದೇವಸ್ಥಾನ ಅಷ್ಟೇ ಅಲ್ಲದೇ ಎಲ್ಲ ಕಡೆಯೂ ನಮ್ಮ ಕಂಪನಿಯ ತುಪ್ಪ ಸಿಗುತ್ತದೆ. ಅನೇಕ ಸ್ಥಳಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಅಲ್ಲಿಗೆ ಹೋಗಿ ಅವುಗಳ ಗುಣಮಟ್ಟ ಪರೀಕ್ಷಿಸಬಹುದು. ತುಪ್ಪದ ಗುಣಮಟ್ಟದಲ್ಲಿ ದೋಷ ಕಂಡು ಬಂದಲ್ಲಿ ಹೇಳಬಹುದು. ಆಹಾರ ಸುರಕ್ಷತಾ ಇಲಾಖೆಯಿಂದ ಮಾದರಿ ಸಂಗ್ರಹಿಸಲಾಗಿದ್ದು, ಈಗಾಗಲೇ ತಿರುಪತಿ ದೇವಸ್ಥಾನದ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಪರೀಕ್ಷೆ ಸಹ ನಡೆಸಲಾಗಿದೆ. ಜೂನ್ ಮತ್ತು ಜುಲೈನಲ್ಲಿ ಕಳುಹಿಸಲಾದ ತುಪ್ಪದಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ ಎಂಬ ವರದಿ ಇದೆ. ಆದರೂ ವದಂತಿ ಹಬ್ಬಿಸಲಾಗುತ್ತಿದೆ. ಒಪ್ಪಂದದ ಪ್ರಕಾರ ಲಡ್ಡು ತಯಾರಿಕೆಗೆ ಮಾತ್ರ ತುಪ್ಪ ಕಳುಹಿಸಲಾಗಿದೆ. ತಿರುಪತಿ ದೇವಸ್ಥಾನಕ್ಕೆ ತುಪ್ಪ ಕಳಿಸಿದವರು ಬಹಳ ಮಂದಿ ಇದ್ದಾರೆ. ತಿರುಪತಿ ದೇವಸ್ಥಾನಕ್ಕೆ ಕಳುಹಿಸುವ ಮೊದಲು ತುಪ್ಪವನ್ನೂ ಪರೀಕ್ಷಿಸಲಾಗುತ್ತದೆ. ಅವರು ಹೇಳಿದ ನಂತರವೂ ಮರು ಪರಿಶೀಲನೆ ನಡೆಸಿದ್ದೇವೆ. ನಮ್ಮ ಕಂಪನಿಯ ತುಪ್ಪ ಶುದ್ಧವಾಗಿದೆ. ನಮ್ಮ ಬಳಿ ಸರಿಯಾದ ಪುರಾವೆಗಳಿವೆ. ದೇವಸ್ಥಾನ ಕೂಡ ಪರಿಶೀಲನೆ ನಡೆಸಿದ್ದು, ಯಾವುದೇ ಲೋಪದೋಷ ಕಂಡುಬಂದಿಲ್ಲ. ಆಹಾರ ಸುರಕ್ಷತಾ ಇಲಾಖೆ ಮತ್ತು ಐಎಸ್‌ಐ ಆಗ್ಮಾರ್ಕ್ನ ಅಧಿಕಾರಿಗಳು ಕೂಡ ಮಾದರಿಗಳನ್ನು ತೆಗೆದುಕೊಂಡು ಅವುಗಳನ್ನು ವಿಶ್ಲೇಷಿಸಿದ್ದಾರೆ. ಮೇಲಾಗಿ ಇದುವರೆಗೆ ಯಾವುದೇ ದೂರುಗಳು ಬಂದಿಲ್ಲ’ ಎಂದು ಲೆನಿ ಮತ್ತು ಕಣ್ಣನ್ ಸ್ಪಷ್ಟಪಡಿಸಿದ್ದಾರೆ.
ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ (ETV Bharat) ತುಪ್ಪದಲ್ಲಿ ಗುಣಮಟ್ಟದ ಕೊರತೆ: ದೇವಸ್ಥಾನದ ಲಡ್ಡು ಪಾವಿತ್ರ್ಯತೆಯನ್ನು ಮರುಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಮತ್ತೊಂದೆಡೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ಹೇಳಿದ್ದಾರೆ. ಇಂದು ಮಧ್ಯಾಹ್ನ ತಿರುಮಲದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಲಡ್ಡು ಗುಣಮಟ್ಟದ ಬಗ್ಗೆ ಕೆಲ ದಿನಗಳಿಂದ ದೂರುಗಳು ಬರುತ್ತಿವೆ. ಗುಣಮಟ್ಟದ ಕುರಿತು ಸಿಬ್ಬಂದಿ ಜತೆ ಮಾತನಾಡಿದ್ದೇನೆ. ಲಡ್ಡು ಗುಣಮಟ್ಟದಿಂದ ಕೂಡಿರಬೇಕಾದರೆ ತುಪ್ಪ ಉತ್ತಮ ಗುಣಮಟ್ಟದ್ದಾಗಿರಬೇಕು. ಆದರೆ, ತುಪ್ಪದಲ್ಲಿ ಗುಣಮಟ್ಟದ ಕೊರತೆ ಇರುವುದು ಗಮನಿಸಿದ್ದೇನೆ. ತುಪ್ಪದ ಗುಣಮಟ್ಟವನ್ನು ನಿರ್ಧರಿಸಲು ಟಿಟಿಡಿ ತನ್ನದೇ ಆದ ಪ್ರಯೋಗಾಲಯವನ್ನು ಹೊಂದದಿರುವುದೂ ಕೂಡ ಸಮಸ್ಯೆಗೆ ಕಾರಣ. ಈ ಹಿಂದೆ ತುಪ್ಪದ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಯಾವುದೇ ಪರೀಕ್ಷೆ ನಡೆಸಿರಲಿಲ್ಲ. ಗುಣಮಟ್ಟದ ಖಾತ್ರಿಗಾಗಿ ಹೊರಗಿನ ಲ್ಯಾಬ್ಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಪ್ರತಿ ಕೆ.ಜಿ.ಗೆ 320 ರಿಂದ 411 ರೂ.ಗೆ ತುಪ್ಪ ಪೂರೈಕೆಯಾಗುತ್ತಿದೆ. ಇಷ್ಟು ಕಡಿಮೆ ಬೆಲೆಗೆ ಗುಣಮಟ್ಟದ ತುಪ್ಪ ಪೂರೈಕೆ ಸಾಧ್ಯವಿಲ್ಲ. ನಾವು ಎಚ್ಚರಿಕೆ ನೀಡಿದ ನಂತರ ಗುಣಮಟ್ಟ ಹೆಚ್ಚಿಸಿಕೊಂಡರು ಎಂದು ಕೆಲವು ದತ್ತಾಂಶಗಳ ಸಹಿತ ವಿವರಣೆ ನೀಡಿದರು.
100ಕ್ಕೆ 20 ಅಂಕಗಳು ಮಾತ್ರ: ಸದ್ಯ ಗುಣಮಟ್ಟದ ಭರವಸೆಗಾಗಿ ತುಪ್ಪವನ್ನು ಗುಜರಾತ್‌ನ ಎನ್‌ಡಿಡಿಬಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಲ್ಯಾಬ್ ಪರೀಕ್ಷೆಗಳಲ್ಲಿ ತುಪ್ಪದ ಗುಣಮಟ್ಟ ಉತ್ತಮವಾಗಿಲ್ಲ ಎಂದು ಕಂಡು ಬಂದಿದೆ. ಜುಲೈ 6 ರಂದು ಪ್ರಯೋಗಾಲಯಗಳಿಗೆ ತುಪ್ಪವನ್ನು ಕಳುಹಿಸಲಾಗಿದ್ದು, ಒಂದು ವಾರದೊಳಗೆ ಲ್ಯಾಬ್ ವರದಿಗಳು ಬಂದಿವೆ. 10 ಪ್ರಯೋಗಾಲಯಗಳಿಗೆ ನಾಲ್ಕು ಟ್ಯಾಂಕರ್ ತುಪ್ಪವನ್ನು ಕಳುಹಿಸಿದ್ದೆವು. ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಕಳಪೆ ಗುಣಮಟ್ಟದ ಮತ್ತು ಹೆಚ್ಚು ಕಲಬೆರಕೆಯಾಗಿದೆ ಎಂಬ ವರದಿ ಬಂದಿದೆ. ಪ್ರಯೋಗಾಲಯದ ವರದಿಯನ್ನು ಎರಡು ವಿಭಾಗಗಳಲ್ಲಿ ನೀಡಲಾಗಿದ್ದು, ತುಪ್ಪದಲ್ಲಿ ಹೆಚ್ಚು ಕಲಬೆರಕೆಯಾಗಿದೆ ಎಂದು ವರದಿ ಇದೆ. 100 ಅಂಕಗಳಿರಬೇಕಾದ ತುಪ್ಪದ ಗುಣಮಟ್ಟ ಕೇವಲ 20 ಅಂಕಗಳು ಮಾತ್ರ ಇದೆ. ಪ್ರಾಣಿಗಳ ಕೊಬ್ಬನ್ನು ತುಪ್ಪದಲ್ಲಿ ಬೆರೆಸಲಾಗುತ್ತದೆ ಎಂಬ ಅನುಮಾನ ಕೂಡ ವ್ಯಕ್ತಪಡಿಸಿದೆ. ತುಪ್ಪದಲ್ಲಿ ಕಲಬೆರಕೆಯಾಗಿರುವುದು ಕಂಡು ಬಂದ ಕೂಡಲೇ ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಕಂಡು ಬರದಂತೆ ಕ್ರಮಕೈಗೊಳ್ಳಲು ಸಮಿತಿಯೊಂದನ್ನು ರಚಿಸಿದ್ದೇವೆ. ಟಿಟಿಡಿ ಇತಿಹಾಸದಲ್ಲಿ ತುಪ್ಪವನ್ನು ಕಲಬೆರಕೆ ಪರೀಕ್ಷೆಗೆ ಕಳುಹಿಸಲಾಗಿದೆ. ತಮಿಳುನಾಡಿನ ಎಆರ್ ಫುಡ್ಸ್ ಸರಬರಾಜು ಮಾಡುವ ತುಪ್ಪ ಕೂಡ ಕಲಬೆರಕೆಯಿಂದ ಕೂಡಿದೆ. ಪ್ರಾಣಿಗಳ ಕೊಬ್ಬು, ತಾಳೆ ಎಣ್ಣೆ, ದ್ರಾಕ್ಷಿ ಬೀಜ, ಅಗಸೆಬೀಜ, ಮೀನಿನ ಎಣ್ಣೆ ಸೇರಿವೆ ಎಂಬ ವರದಿ ಇದೆ. ಹೀಗಾಗಿ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆದಿದೆ ಎಂದು ಅವರು ಹೇಳಿದರು.
ಮಾಜಿ ಪ್ರಧಾನ ಅರ್ಚಕರ ಅಸಮಾಧಾನ: ಟಿಟಿಡಿಯ ಮಾಜಿ ಪ್ರಧಾನ ಅರ್ಚಕ ರಮಣ ದೀಕ್ಷಿತುಲು ಪ್ರತಿಕ್ರಿಯಿಸಿ, ತಿರುಮಲದಲ್ಲಿ ಪ್ರಸಾದದ ಗುಣಮಟ್ಟದ ಬಗ್ಗೆ ಟಿಟಿಡಿ ಅಧ್ಯಕ್ಷ ಹಾಗೂ ಇಒ ಗಮನಕ್ಕೆ ತಂದಿದ್ದೆ. ಆದರೆ, ಅದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪವಿತ್ರವಾದ ಗೋವಿನ ತುಪ್ಪವನ್ನು ಕಲಬೆರಕೆ ಮಾಡಿ ಪ್ರಸಾದಕ್ಕೆ ಬಳಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಆಗ ಯಾವೊಬ್ಬ ಅರ್ಚಕರೂ ತಮ್ಮ ವೈಯಕ್ತಿಕ ಕಾರಣಗಳಿಂದ ಮುಂದೆ ಬರಲಿಲ್ಲ. ಕಳೆದ ಐದು ವರ್ಷಗಳಿಂದ ಈ ಮಹಾಪಾಪ ನಡೆದುಕೊಂಡು ಬಂದಿದೆ. ಪರೀಕ್ಷೆಗೆ ಕಳುಹಿಸಲಾದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಸೇರಿಸಲಾಗಿದೆ ಎಂಬ ವರದಿ ಬಂದಿರುವುದನ್ನು ಗಮನಿಸಿದ್ದೇನೆ ಎಂದರು.
ಇದನ್ನೂ ಓದಿ:ತಿರುಪತಿ ಲಡ್ಡು ಕಲಬೆರಕೆ ವಿವಾದ: ದೇಶಾದ್ಯಂತ ಆಕ್ರೋಶ, ಕೇಂದ್ರ ಸಚಿವರ ಕಿಡಿ - Tirupati Laddu Row