ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಶನಿವಾರ ಗುಡುಗು ಮಿಂಚಿನ ಸಹಿತದ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 3 ಗಂಟೆಗಳಲ್ಲಿ ಉತ್ತರಾಖಂಡ್, ತಮಿಳುನಾಡು ಹಾಗೂ ರಾಜಸ್ಥಾನದಲ್ಲಿ ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಪಂಜಾಬ್, ಹರಿಯಾಣ, ದೆಹಲಿ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಕೂಡ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಮುಂದಿನ 3 ಗಂಟೆಗಳಲ್ಲಿ ದಕ್ಷಿಣ ಪಂಜಾಬ್, ಹರಿಯಾಣ, ದೆಹಲಿ, ಪಶ್ಚಿಮ ಉತ್ತರ ಪ್ರದೇಶ, ಮೇಘಾಲಯ, ಆಗ್ನೇಯ ಅರುಣಾಚಲ ಪ್ರದೇಶ, ಆಗ್ನೇಯ ಅಸ್ಸೋಂ, ಮಣಿಪುರ, ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕೇರಳದಲ್ಲಿ ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ದೆಹಲಿಯಲ್ಲಿ ವಿಮಾನ ಹಾರಾಟ ವ್ಯತ್ಯಯ: ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಧೂಳಿನಿಂದ ಕೂಡಿದ ಬಲವಾದ ಗಾಳಿ ಮತ್ತು ಮಳೆಯಾಗಿದೆ. ಕೆಟ್ಟ ಹವಾಮಾನದಿಂದ 9 ವಿಮಾನಗಳ ಹಾರಾಟದಲ್ಲಿ ವ್ಯತ್ಯವಾಗಿದೆ. ಕೆಟ್ಟ ಹವಾಮಾನದಿಂದ ಕೆಲವು ವಿಮಾನಗಳನ್ನು ದೆಹಲಿ ಬದಲಾಗಿ ಜೈಪುರದಲ್ಲಿ ಇಳಿಸಲಾಗಿದೆ.