ಸಂಭಾಲ್, ಉತ್ತರಪ್ರದೇಶ : ಇಲ್ಲಿ ಕಳೆದ 46 ವರ್ಷಗಳಿಂದ ಮುಚ್ಚಿದ್ದ ದೇಗುಲದ ಬಾಗಿಲನ್ನು ತೆರೆಯಲಾಗಿದೆ. ಆ ದೇಗುಲದ ಸಮೀಪದ ಬಾವಿಯನ್ನು ಅಗೆದಾಗ ಮುರಿದ ರೀತಿಯ ಮೂರು ವಿಗ್ರಹಗಳು ಪತ್ತೆಯಾಗಿವೆ. ಇವು ಪಾರ್ವತಿ, ಗಣೇಶ ಮತ್ತು ಲಕ್ಷ್ಮಿ ವಿಗ್ರಹಗಳಾಗಿವೆ. ಬಾವಿ ಅಗೆಯುವ ಕೆಲಸ ಮುಂದುವರೆಸಲಾಗಿದೆ. ಬಾವಿಯಲ್ಲಿ ದೇವರ ಮೂರ್ತಿ ಪತ್ತೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಜನರು ಸುತ್ತುವರೆದಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಈ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ಡಾ ರಾಜೇಂದ್ರ ಪೆನ್ಸಿಯಾ ಮತ್ತು ಎಸ್ಪಿ ಕೃಷ್ಣ ಕುಮಾರ್ ವಿಷ್ಣೋಯಿ, ಭಾರತೀಯ ಪುರಾತತ್ವ ಇಲಾಖೆಗೆ ಈ ಕುರಿತು ಪತ್ರ ಮುಖೇನ ಮಾಹಿತಿ ನೀಡಲಾಗಿದೆ. ಅಮೃತ್ ಕೂಪ್ನಲ್ಲಿರುವ ಬಾವಿಯಲ್ಲಿ ಈ ದೇವರ ವಿಗ್ರಹಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.
46 ವರ್ಷಗಳಿಂದ ಬಂದ್ ಆಗಿದ್ದ ಶಿವ ದೇಗುಲವನ್ನು ಡಿ. 14ರಂದು ತೆರೆಯಲಾಯಿತು. ಈ ವೇಳೆ ಬಾವಿಯಲ್ಲಿ ಮಣ್ಣು ತುಂಬಿದ್ದು, ಅದನ್ನು ಶುಚಿಗೊಳಿಸುವಾಗ ಈ ವಿಗ್ರಹಗಳು ಪತ್ತೆಯಾಗಿವೆ. ಪತ್ತೆಯಾಗಿರುವ ವಿಗ್ರಹ 10 ರಿಂದ 13 ಅಡಿ ಎತ್ತರವಿದೆ. ಇನ್ನು ಪಾರ್ವತಿ ವಿಗ್ರಹದ ತಲೆ ತುಂಡಾಗಿರುವುದು ಕಂಡು ಬಂದಿದೆ. ಈ ವಿಗ್ರಹಗಳು ಹೇಗೆ ಬಾವಿಯೊಳಗೆ ಹೋದವು, ಏನಾಯಿತು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒತ್ತುವರಿ ತೆರವು ಮಾಡುವಂತೆ ಸೂಚನೆ:ಇದೇ ವೇಳೆ ದೇಗುಲದ ಜಾಗ ಒತ್ತುವರಿ ಮಾಡಲಾಗಿದ್ದು, ಅದನ್ನು ತೆರವು ಮಾಡುವಂತೆ ಜನರಿಗೆ ತಿಳಿಸಲಾಗಿದೆ. ಕೆಲವು ಜನರು ಸ್ವಯಂ ಒತ್ತುವರಿ ತೆರವಿಗೆ ಮುಂದಾಗಿದ್ದು, ಮತ್ತೆ ಕೆಲವರಿಗೆ ಈ ಕುರಿತು ಮನವಿ ಮಾಡಲಾಗಿದೆ.
ಖಗ್ಗು ಸರೈ ಪ್ರದೇಶದಲ್ಲಿ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ವಿದ್ಯುತ್ ಕಳವು ಪತ್ತೆ ಕಾರ್ಯಾಚರಣೆ ನಡೆಸುತ್ತಿರುದ್ದಾಗ ಈ ಮಂದಿರ ಇರುವುದು ಪತ್ತೆಯಾಗಿತ್ತು. ಮುಸ್ಲಿಂ ಸಮುದಾಯ ಹೆಚ್ಚಾಗಿರುವ ಪ್ರದೇಶದಲ್ಲಿರುವ ಈ ದೇಗುಲವನ್ನು 1978ರಲ್ಲಿ ನಡೆದ ಗಲಭೆ ಬಳಿಕ ಮುಚ್ಚಲಾಗಿತ್ತು. ಅಂದಿನಿಂದ ಇಲ್ಲಿ ಪೂಜೆಗಳು ಸ್ಥಗಿತಗೊಂಡಿದ್ದವು, ಇಲ್ಲಿ ಪೂಜೆ ನಿರ್ವಹಿಸುತ್ತಿದ್ದ ಹಿಂದೂ ಕುಟುಂಬ ಕೂಡ ವಲಸೆ ಹೋಗಿತ್ತು. ಇದೀಗ ಅಕ್ರಮ ಒತ್ತುವರಿ ತೆರವು ಮಾಡಿ, ಹಿಂದೂ ದೇಗುಲವನ್ನು ಶುಚಿ ಮಾಡಲಾಗಿದ್ದು, ದೇವರ ದರ್ಶನಕ್ಕೆ ಮುಕ್ತವಾಗಿರುವ ಹಿನ್ನಲೆ ಹಿಂದೂ ಸಮುದಾಯದ ಭಕ್ತರು ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಆಗಮಿಸುತ್ತಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಡಿಸಿ ಅವರು ಹೇಳಿದ್ದು ಇಷ್ಟು:ಜಿಲ್ಲಾಧಿಕಾರಿ ಡಾ ರಾಜೇಂದ್ರ ಪೆನ್ಸಿಯಾ ಮಾತನಾಡಿ, ಸಂಭಾಲ್ನಲ್ಲಿ 19 ಬಾವಿಗಳು ಪತ್ತೆಯಾಗಿವೆ. ಇದೀಗ ಪತ್ತೆಯಾಗಿರುವ ದೇಗುಲ, ಕಾರ್ತಿಕ ಮಹದೇವನಿಗೆ ಸಮರ್ಪಿತವಾಗಿದೆ ಎಂಬುದು ಕಂಡು ಬಂದಿದೆ. ಇಲ್ಲಿರುವ ಬಾವಿಯನ್ನು ಅಮೃತ್ ಕೂಪ್ ಎಂದು ಪತ್ತೆ ಹೇಳಲಾಗುತ್ತಿದೆ. ಸದ್ಯ ಇಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ:ಆನೆ ಉರುಳಿಸಿದ ತಾಳೆಮರದ ಗರಿ ಬಡಿದು ಬೈಕ್ನಲ್ಲಿ ಸಾಗುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು