ಕರ್ನಾಟಕ

karnataka

ETV Bharat / bharat

140 ಕೋಟಿ ಜನರ ಮನಸ್ಸಿನಲ್ಲಿ ನಂಬಿಕೆ, ವಿಶ್ವಾಸ ಮರುಸ್ಥಾಪಿಸಿರುವುದು ನಮ್ಮ ಸಾಧನೆ: ಪ್ರಧಾನಿ ಮೋದಿ - PM Modi Interview - PM MODI INTERVIEW

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಎಕ್ಸ್​ಕ್ಲೂಸಿವ್ ಸಂದರ್ಶನ ಇಲ್ಲಿದೆ.

PM Modi's exclusive interview with Eenadu media house
PM Modi's exclusive interview with Eenadu media house ((image : ETV Bharat))

By ETV Bharat Karnataka Team

Published : May 5, 2024, 2:20 PM IST

Updated : May 5, 2024, 10:47 PM IST

ಹೈದರಾಬಾದ್:ಕಳೆದ ಹತ್ತು ವರ್ಷಗಳಲ್ಲಿ ದೇಶದ 140 ಕೋಟಿ ಜನರ ಮನಸ್ಸಿನಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ಸ್ಥಾಪಿಸಿರುವುದು ತಮ್ಮ ಕಳೆದ 10 ವರ್ಷಗಳ ಆಡಳಿತದ ಪ್ರಮುಖ ಸಾಧನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ ಈನಾಡು ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದರು.

ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿದ ತಪ್ಪುಗಳನ್ನು ಸರಿಮಾಡುವುದರಲ್ಲಿಯೇ ಆಡಳಿತದ ಮೊದಲ ಐದು ವರ್ಷಗಳು ಕಳೆದು ಹೋದವು. ಆದರೆ ಈಗ ಜಗತ್ತನ್ನು ಆಳುವ ಸಂದರ್ಭ ಭಾರತದ ಮುಂದಿದೆ, ಈ ಅವಕಾಶವನ್ನು ನಾವು ಕಳೆದುಕೊಳ್ಳಬಾರದು ಎಂದು ಅವರು ನುಡಿದರು.

"ದೇಶ ಸೇವೆಯ ಭಾಗ್ಯ ಸಿಕ್ಕಿರುವುದು ಮತ್ತು 140 ಕೋಟಿ ಭಾರತೀಯರ ಭರವಸೆ ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ಜವಾಬ್ದಾರಿಯುತ ಸ್ಥಾನ ನನಗೆ ಸಿಕ್ಕಿರುವುದು ದೇವರ ಆಶೀರ್ವಾದ ಎಂದು ಭಾವಿಸುತ್ತೇನೆ. ಭಾರತವು ತನ್ನ ಗಮ್ಯಸ್ಥಾನವನ್ನು ತಲುಪಲು ಸಹಾಯ ಮಾಡಲು ಯಾವುದೋ ದೈವಿಕ ಶಕ್ತಿ ನನ್ನ ಮೂಲಕ ಈ ಕೆಲಸ ಮಾಡಿಸುತ್ತಿದೆ ಎಂದು ಕೆಲವೊಮ್ಮೆ ಅನಿಸುತ್ತದೆ. ಈ ಆಲೋಚನೆಯು ಮತ್ತಷ್ಟು ಹೆಚ್ಚು ಗಮನ ಮತ್ತು ಸಮರ್ಪಣೆಯೊಂದಿಗೆ ಕೆಲಸ ಮಾಡಲು ನನ್ನನ್ನು ಪ್ರೇರೇಪಿಸುತ್ತದೆ. ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ 25 ಕೋಟಿ ಜನರು ಬಡತನದಿಂದ ಹೊರಬರಲು ಸಾಧ್ಯವಾಯಿತು. ನೇರ ನಗದು ವರ್ಗಾವಣೆ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ, ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಒದಗಿಸುವ ಪ್ರಕ್ರಿಯೆಯಲ್ಲಿ 3.5 ಲಕ್ಷ ಕೋಟಿ ರೂ.ಗಳ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ನಮಗೆ ಸಾಧ್ಯವಾಗಿದೆ. ನಾವು ಡಿಜಿಟಲ್ ಪಾವತಿಗಳ ಬಗ್ಗೆ ಹೇಳಿದಾಗ ನಮ್ಮನ್ನು ನೋಡಿ ನಕ್ಕಿದ್ದರು. ಈಗ 2024ರಲ್ಲಿ ಹಿಂತಿರುಗಿ ನೋಡಿದರೆ, ಭಾರತವು ಈ ಕ್ಷೇತ್ರವನ್ನು ಆಳುವ ಮಟ್ಟವನ್ನು ತಲುಪಿದೆ. 370 ನೇ ವಿಧಿಯನ್ನು ರದ್ದುಪಡಿಸುವುದರೊಂದಿಗೆ ಪ್ರಾರಂಭಿಸಿ, ನಾವು ಮಹಿಳಾ ಮೀಸಲಾತಿ ಮಸೂದೆಯ ಅನುಮೋದನೆಯವರೆಗೆ ಬಂದಿದ್ದೇವೆ. ಈ ದೇಶದ ಕಾನೂನುಗಳ ಅಡಿಯಲ್ಲಿ ಭಗವಾನ್ ಶ್ರೀ ರಾಮಚಂದ್ರನ ಮಂದಿರವನ್ನು ಮರಳಿ ಕಟ್ಟಲು ನಮಗೆ ಸಾಧ್ಯವಾಯಿತು. ಸ್ವಾತಂತ್ರ್ಯ ಶತಮಾನೋತ್ಸವದ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ನಾವು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ಮೊದಲ 100 ದಿನಗಳಲ್ಲಿ ಈ ಬಗ್ಗೆ ಕೆಲಸ ಮಾಡಲು ಪ್ರಾರಂಭಿಸಲಿದ್ದೇವೆ. ಮುಖ್ಯಮಂತ್ರಿಯಾಗಿ ವ್ಯಾಪಕ ಅನುಭವ ಹೊಂದಿರುವ ಕೆಲವೇ ಕೆಲವು ಪ್ರಧಾನ ಮಂತ್ರಿಗಳಲ್ಲಿ ನಾನು ಒಬ್ಬ. ಹೀಗಾಗಿ ನಾನು ರಾಜ್ಯಗಳ ಕಾಳಜಿಯನ್ನು ಅರ್ಥಮಾಡಿಕೊಳ್ಳಬಲ್ಲೆ" ಎಂದು ಪ್ರಧಾನಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ..

ಪ್ರಶ್ನೆ: ನೀವು ಉತ್ತಮ ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯದ ಸಂಕೇತವಾಗಿ ಕಾಣುವಿರಿ. ನಿಮ್ಮ ಆರೋಗ್ಯದ ರಹಸ್ಯವೇನು? ನೀವು ದಿನಕ್ಕೆ ಎಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತೀರಿ? ರಜೆ ತೆಗೆದುಕೊಳ್ಳದೆ ನಿರಂತರವಾಗಿ ಕೆಲಸ ಮಾಡಲು ನಿಮ್ಮನ್ನು ಪ್ರೇರೇಪಿಸುವ ಅಂಶಗಳೇನು?

ಪ್ರಧಾನಿ ಮೋದಿ : ದಿನದಲ್ಲಿ ಲೆಕ್ಕ ಹಾಕಿ ಕೆಲಸ ಮಾಡುವ ವ್ಯಕ್ತಿ ನಾನಲ್ಲ. ಕೆಲ ಉತ್ತಮ ಅಭ್ಯಾಸಗಳನ್ನು ನಾನು ಚಿಕ್ಕ ವಯಸ್ಸಿನಲ್ಲಿಯೇ ಕಲಿತಿದ್ದೇನೆ ಮತ್ತು ಈಗಲೂ ಅವನ್ನು ಅನುಸರಿಸುತ್ತೇನೆ. ಹಿಮಾಲಯದಲ್ಲಿ ಕಳೆದ ದಿನಗಳಲ್ಲಿ, ನಾನು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮುಗಿಸುತ್ತಿದ್ದೆ. ಅಂದಿನಿಂದ ಈಗಲೂ ಅದೇ ಅಭ್ಯಾಸವನ್ನು ಮುಂದುವರಿಸಿದ್ದೇನೆ. ನಿಯಮಿತವಾಗಿ ಯೋಗ ಮತ್ತು ಧ್ಯಾನ ಮಾಡುತ್ತೇನೆ. ದೀರ್ಘಾವಧಿಗೆ ನಾನು ನಿದ್ರೆ ಮಾಡುವುದಿಲ್ಲ. ನನ್ನ ಜೀವನದಲ್ಲಿ ಕೆಲಸ ಮತ್ತು ವಿಶ್ರಾಂತಿಯ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಾನು ಕೆಲಸದಲ್ಲಿ ವಿಶ್ರಾಂತಿ ಪಡೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ.

ಪ್ರಶ್ನೆ:ಈ ಚುನಾವಣೆಯು ನಿಮ್ಮ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಜನಾಭಿಪ್ರಾಯವಾಗಿರಲಿದೆ ಎಂದು ನೀವು ಭಾವಿಸುವಿರಾ?

ಪ್ರಧಾನಿ ಮೋದಿ :ನಮ್ಮ ದೇಶದಲ್ಲಿ ನಡೆಯುತ್ತಿರುವ ಚುನಾವಣೆಗಳು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಉತ್ಸವವಾಗಿವೆ. ದೇಶದ ಜನ ನಮ್ಮ ಸರ್ಕಾರದ ಕಠಿಣ ಪರಿಶ್ರಮ ಮತ್ತು ಟ್ರ್ಯಾಕ್ ರೆಕಾರ್ಡ್ ಅನ್ನು ನೋಡಿದ್ದಾರೆ. ಒಂದು ದಶಕದಲ್ಲಿ ದೇಶ ಹೇಗೆಲ್ಲ ರೂಪಾಂತರಗೊಂಡಿದೆ ಎಂಬುದನ್ನು ಗಮನಿಸಿದ್ದಾರೆ. ಹೀಗಾಗಿ ಇದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಅವರು ಬಯಸುತ್ತಾರೆ. ಸರ್ಕಾರದಲ್ಲಿರುವವರ ಮೇಲೆ ಅಪರೂಪವಾಗಿ ಕಂಡುಬರುವ ಸಕಾರಾತ್ಮಕತೆಯು ನಮ್ಮ ಸರ್ಕಾರದ ಬಗ್ಗೆ ಎಲ್ಲೆಡೆ ಕಾಣಿಸಿದೆ. ನಾನು ಎಲ್ಲಿಗೇ ಹೋದರೂ ತಾಯಂದಿರು ಮತ್ತು ಸಹೋದರಿಯರು ನನ್ನನ್ನು ಆಶೀರ್ವದಿಸುತ್ತಾರೆ.

ಪ್ರಶ್ನೆ:ನಿಮ್ಮ ಆಡಳಿತದ ಬಗ್ಗೆ ಯುವಕರಿಗೆ ಇರುವ ಅಭಿಮತ, ವಿಪಕ್ಷಗಳ ಯೋಜನೆಯ ಬಗ್ಗೆ ನಿಮ್ಮ ವಿಶ್ಲೇಷಣೆ ಏನು?

ಪ್ರಧಾನಿ ಮೋದಿ :ಯುವಕರು ದೇಶದ ಭವಿಷ್ಯದ ಬಗ್ಗೆ ಬಹಳ ಸಕಾರಾತ್ಮಕ ದೃಷ್ಟಿಕೋನವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕಾಗಿಯೇ ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕನ್ನು ಪಡೆದವರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಬರುತ್ತಿದ್ದಾರೆ. ಜನರು ಈ ಚುನಾವಣೆಯಲ್ಲಿ ತಾವೇ ಸ್ಪರ್ಧಿಸುತ್ತಿರುವಂತೆ ಭಾಗವಹಿಸುತ್ತಿದ್ದಾರೆ. ನಮಗೆ ನೀಡುವ ಪ್ರತಿಯೊಂದು ಮತವೂ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ನೀಡುವ ಮತ ಎಂಬುದು ಜನರಿಗೆ ತಿಳಿದಿದೆ. ಒಂದೆಡೆ, ನಾವು ಮಾಡಿದ ಕೆಲಸಗಳು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ತಿಳಿಸುವ ಮೂಲಕ ಜನರಿಗೆ ಮತ ಕೇಳುತ್ತಿದ್ದರೆ, ಪ್ರತಿಪಕ್ಷಗಳು ಮೋದಿ ವಿರುದ್ಧ ಪ್ರಚಾರ ಮಾಡುತ್ತಿವೆ. ಮಾಡಲು ಯಾವುದೇ ಕೆಲಸವಿಲ್ಲದೆ ಮತ್ತು ಭವಿಷ್ಯದ ಬಗ್ಗೆ ಯಾವುದೇ ಆಲೋಚನೆಗಳಿಲ್ಲದೆ ಅವರು ನನ್ನನ್ನು ಅವಮಾನಿಸುತ್ತಿದ್ದಾರೆ. ಮೋದಿಯನ್ನು ಪದಚ್ಯುತಗೊಳಿಸುವುದೇ ಅವರ ಕಾರ್ಯಸೂಚಿಯಾಗಿದೆ.

ಪ್ರಶ್ನೆ: ಮುಂದಿನ ಐದು ವರ್ಷಗಳಲ್ಲಿ ನಿಮ್ಮ ಪ್ರಮುಖ ಆದ್ಯತೆಗಳು ಯಾವುವು?

ಪ್ರಧಾನಿ ಮೋದಿ: ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ಮತ್ತಷ್ಟು ವೇಗದಿಂದ ಅಭಿವೃದ್ಧಿ ಕೆಲಸಗಳನ್ನು ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಾವು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ಮೊದಲ 100 ದಿನಗಳಲ್ಲಿ ಈ ಬಗ್ಗೆ ಕೆಲಸ ಮಾಡಲು ಪ್ರಾರಂಭಿಸುತ್ತೇವೆ. ನಂತರ ನಾವು ಮುಂದಿನ 5 ವರ್ಷಗಳವರೆಗೆ ಪೂರ್ಣ ಪ್ರಮಾಣದ ಯೋಜನೆಯನ್ನು ಜಾರಿಗೆ ತರುತ್ತೇವೆ. ನಾವು 2014 ರಲ್ಲಿ ಅಧಿಕಾರ ವಹಿಸಿಕೊಂಡಾಗ, ದೇಶಕ್ಕಾಗಿದ್ದ ಹಾನಿಯನ್ನು ಸರಿಪಡಿಸಲು ಯುದ್ಧೋಪಾದಿಯಲ್ಲಿ ಕೆಲಸ ಮಾಡಿದ್ದೇವೆ. ಸಂಪೂರ್ಣ ಬದಲಾವಣೆ ಅಗತ್ಯವಿರುವಲ್ಲಿ ನಾವು ಅದನ್ನು ಮಾಡಿದ್ದೇವೆ. ಯುಪಿಎ ಸರ್ಕಾರ ಬಿಟ್ಟು ಹೋದ ಕೆಟ್ಟ ಆಡಳಿತದ ತಪ್ಪುಗಳನ್ನು ಸರಿಪಡಿಸುವುದು ನಮಗೆ ಭಾರಿ ಸವಾಲಾಗಿತ್ತು. ಎರಡನೇ ಹಂತದಲ್ಲಿ ನಾವು ದೀರ್ಘಕಾಲೀನ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ತೊಡಗಿಸಿಕೊಂಡೆವು.

ಪ್ರಶ್ನೆ: ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವಲ್ಲಿ ನಿಮ್ಮ ನಾಯಕತ್ವದಲ್ಲಿ ದೇಶವು ಎಷ್ಟು ಪ್ರಗತಿ ಸಾಧಿಸಿದೆ? ಆ ಆರ್ಥಿಕ ಪ್ರಗತಿಯ ಫಲ ಜನತೆಗೆ ಯಾವಾಗ ತಲುಪಲಿದೆ?

ಪ್ರಧಾನಿ ಮೋದಿ: ನಾವು ಈಗಾಗಲೇ ಅಭಿವೃದ್ಧಿಯ ಫಲವನ್ನು ಪಡೆಯುತ್ತಿಲ್ಲ ಎಂದು ಯಾರಾದರೂ ಭಾವಿಸಿದರೆ ಅವರಿಗೆ ವಾಸ್ತವತೆಯ ಅರಿವಿಲ್ಲ ಎಂದು ಹೇಳಬೇಕಾಗುತ್ತದೆ. ನಮ್ಮ ಸುತ್ತಲಿನ ವಿಶ್ವದ ದೇಶಗಳು ಹಣದುಬ್ಬರ ಮತ್ತು ಬೆಲೆಯೇರಿಕೆಗಳಿಂದ ಬಳಲುತ್ತಿರುವ ಸಮಯದಲ್ಲಿ ಭಾರತದ ಪರಿಸ್ಥಿತಿ ವಿಭಿನ್ನವಾಗಿದೆ. ಇದು ನಮ್ಮ ವಿಶಿಷ್ಟ ಅಭಿವೃದ್ಧಿ ಸ್ಥಿತಿಯ ನೇರ ಮತ್ತು ಪ್ರಬಲ ಸಂಕೇತವಾಗಿದೆ. ನಾವು ವಿಶ್ವದ ಯಾವುದೇ ಪ್ರಮುಖ ಆರ್ಥಿಕತೆಗಿಂತ ವೇಗವಾಗಿ ಬೆಳೆಯುತ್ತಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ ಕೋವಿಡ್, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ವಿಶ್ವದಾದ್ಯಂತ ಬೆಲೆ ಏರಿಕೆಯಂತಹ ಸಮಸ್ಯೆಗಳ ಹೊರತಾಗಿಯೂ ಹಣದುಬ್ಬರವನ್ನು ಸರಾಸರಿ ಶೇ 5ಕ್ಕೆ ಸೀಮಿತಗೊಳಿಸಲು ನಾವು ಕ್ರಮಗಳನ್ನು ಕೈಗೊಂಡಿದ್ದೇವೆ.

ಪ್ರಶ್ನೆ: ಹತ್ತು ವರ್ಷಗಳ ನಿಮ್ಮ ಅಧಿಕಾರಾವಧಿ ಹೇಗಿತ್ತು? ನಿಮ್ಮ ದೊಡ್ಡ ಸಾಧನೆಗಳು ಯಾವುವು? ನೀವು ಮಾಡಲು ಬಯಸಿದ ಆದರೆ ಮಾಡಲು ಸಾಧ್ಯವಾಗದ ವಿಷಯಗಳು ಏನಾದರೂ ಇವೆಯಾ? ಯಾವುದೇ ಅನಿರೀಕ್ಷಿತ ಯಶಸ್ಸು ಸಿಕ್ಕಿದೆಯಾ? ಈ 10 ವರ್ಷಗಳಲ್ಲಿ ನಿಮಗೆ ಯಾವ ಸಾಧನೆ ತೃಪ್ತಿ ನೀಡಿದೆ?

ಪ್ರಧಾನಿ ಮೋದಿ : 140 ಕೋಟಿ ಜನರ ಮನಸ್ಸಿನಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ಮರು ಸ್ಥಾಪಿಸಿರುವುದು ನಮ್ಮ ಪ್ರಮುಖ ಸಾಧನೆಯಾಗಿದೆ. 2014 ರ ಹೊತ್ತಿಗೆ ಜನರು ಸುಧಾರಣೆಗಾಗಿ ಹತಾಶರಾಗಿದ್ದರು. ಈ ದೇಶದಲ್ಲಿ ವಿಷಯಗಳು ಎಂದಿಗೂ ಬದಲಾಗುವುದಿಲ್ಲ ಮತ್ತು ಭ್ರಷ್ಟಾಚಾರವು ಯಾವಾಗಲೂ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಭಾವಿಸಿದ್ದರು. ಬಡವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಮತ್ತು ಮಧ್ಯಮ ವರ್ಗದ ಬಗ್ಗೆ ಸರ್ಕಾರಗಳು ಎಂದಿಗೂ ಕಾಳಜಿ ವಹಿಸುವುದಿಲ್ಲ ಎಂಬ ಗ್ರಹಿಕೆ ಇತ್ತು. ಇಂತಹ ಪರಿಸ್ಥಿತಿಯಲ್ಲಿ ನಾವು ಅಧಿಕಾರಕ್ಕೆ ಬಂದಾಗ, ನಾವು ಸರ್ಕಾರದ ಕೆಲಸದ ಸಂಸ್ಕೃತಿಯನ್ನು ಬದಲಾಯಿಸಿದ್ದೇವೆ. ಸರ್ಕಾರವು ತಮ್ಮ ಸಮಸ್ಯೆಗಳು ಮತ್ತು ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಅವುಗಳಿಗೆ ಪರಿಹಾರ ಒದಗಿಸುತ್ತದೆ ಎಂದು ಮೊದಲ ಬಾರಿಗೆ ಜನತೆಗೆ ನಂಬಿಕೆ ಹುಟ್ಟಿತು.

ಪ್ರಶ್ನೆ: ದೇಶದಲ್ಲಿನ ಬಡತನ ಮತ್ತು ಮಹಿಳಾ ಸ್ವಾವಲಂಬನೆಯ ಬಗ್ಗೆ ನಿಮ್ಮ ಸರ್ಕಾರ ಕೈಗೊಂಡ ಕ್ರಮಗಳೇನು?

ಪ್ರಧಾನಿ ಮೋದಿ : ನಮ್ಮ ಪ್ರಯತ್ನದಿಂದಾಗಿ 4 ಕೋಟಿ ಕುಟುಂಬಗಳಿಗೆ ಸ್ವಂತ ಮನೆ ಸಿಕ್ಕಿದೆ. ಇಜ್ಜತ್ ಘರ್​​ಗಳ ಹೆಸರಿನಲ್ಲಿ ನಿರ್ಮಿಸಲಾದ ಶೌಚಾಲಯಗಳು ಮಹಿಳೆಯರ ಘನತೆಯನ್ನು ಎತ್ತಿಹಿಡಿದಿವೆ. ಪ್ರತಿಯೊಂದು ಮನೆಗೂ ಸುರಕ್ಷಿತ ಕುಡಿಯುವ ನೀರು ದೊರೆಯುತ್ತಿದೆ. ಅನಿಲ ಸಂಪರ್ಕವನ್ನು ಒದಗಿಸುವುದರಿಂದ 11 ಕೋಟಿ ಮಹಿಳೆಯರು ಅಪಾಯಕಾರಿ ಹೊಗೆಯನ್ನು ಉಸಿರಾಡುವ ಅಗತ್ಯವಿಲ್ಲದೆ ಆರೋಗ್ಯಕರ ವಾತಾವರಣದಲ್ಲಿ ಅಡುಗೆ ಮಾಡಲು ಸಾಧ್ಯವಾಗಿದೆ. ಇವೆಲ್ಲವೂ ಜನರ ಜೀವನಮಟ್ಟದಲ್ಲಿ ದೊಡ್ಡ ಬದಲಾವಣೆಗಳನ್ನು ತಂದಿವೆ. ಸರ್ಕಾರ ಕೈಗೊಂಡ ಈ ಕ್ರಮಗಳಿಂದಾಗಿ 25 ಕೋಟಿ ಜನರು ಬಡತನದಿಂದ ಹೊರಬರಲು ಸಾಧ್ಯವಾಗಿದೆ.

ಪ್ರಶ್ನೆ: ನಿಮ್ಮ ಆಡಳಿತದ 10 ವರ್ಷದಲ್ಲಿ ಡಿಜಿಟಲ್​ ವ್ಯವಸ್ಥೆಯಲ್ಲಿ ಬದಲಾದ ರೀತಿ ಮತ್ತು ಅದರ ವ್ಯಾಪಕತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಪ್ರಧಾನಿ ಮೋದಿ : ನೀವು ಡಿಜಿಟಲ್ ಪಾವತಿಗಳನ್ನು ನೋಡಿ. ನಾನು ಇದರ ಬಗ್ಗೆ ಪ್ರಸ್ತಾಪಿಸಿದಾಗ, ಬೀದಿ ಬದಿ ವ್ಯಾಪಾರಿಗಳ ಬಳಿ ಇಂಟರ್​ನೆಟ್​ ಎಲ್ಲಿರುತ್ತೆ, ಅವರು ನಗದು ರಹಿತವಾಗಿ ವ್ಯಾಪಾರ ಮಾಡಲು ಹೇಗೆ ಸಾಧ್ಯ ಎಂದು ಮಾಜಿ ಹಣಕಾಸು ಸಚಿವರೊಬ್ಬರು ಪ್ರಶ್ನಿಸಿದ್ದರು. ಈಗ 2024 ರಲ್ಲಿ ನಿಂತು ಹಿಂತಿರುಗಿ ನೋಡಿದರೆ, ಭಾರತವು ಡಿಜಿಟಲ್​ ಪೇಮೆಂಟ್​ ಕ್ಷೇತ್ರವನ್ನು ಆಳುವ ಮಟ್ಟವನ್ನು ತಲುಪಿದೆ. ಈಗ, ನೀವು ಎಲ್ಲಿಗೆ ಹೋದರೂ ಮತ್ತು ಯಾವುದೇ ಅಂಗಡಿಯಲ್ಲಿ ನೋಡಿದರೂ ಕ್ಯೂಆರ್ ಕೋಡ್ ಗೋಚರಿಸುತ್ತದೆ. ಈ ಡಿಜಿಟಲ್ ಪಾವತಿಗಳು ವಿಶ್ವದಾದ್ಯಂತ ಚರ್ಚೆಯ ವಿಷಯವಾಗಿವೆ.

ಪ್ರಶ್ನೆ: ನಿಮ್ಮ ಕೆಲಸದ ಬಗ್ಗೆ ನಿಮಗೆ ತೃಪ್ತಿ ಇದೆಯೇ?, 2047ರ ಸಂಕಲ್ಪ ಏನು?

ಪ್ರಧಾನಿ ಮೋದಿ :ನಾನು ಯಾವುದರಿಂದಲೂ ಸುಲಭವಾಗಿ ತೃಪ್ತನಾಗುವುದಿಲ್ಲ. ನಾನು ಸತತವಾಗಿ ದೇಶಕ್ಕಾಗಿ ಏನನ್ನಾದರೂ ಮಾಡಲು ಬಯಸುತ್ತೇನೆ. ಯಾವಾಗಲೂ ಹೆಚ್ಚು ಕಷ್ಟಪಟ್ಟು ಮತ್ತು ವೇಗವಾಗಿ ಕೆಲಸ ಮಾಡಲು ಬಯಸುತ್ತೇನೆ. ನಾವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸುತ್ತಿದ್ದೇವೆ. ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಜನರು ಬಯಸಿದ್ದಾರೆ ಎಂಬ ವಿಶ್ವಾಸವಿದೆ. 2047 ರ ವೇಳೆಗೆ 'ಅಭಿವೃದ್ಧಿ ಹೊಂದಿದ ಭಾರತದ ಗುರಿ'ಯನ್ನು ಸಾಧಿಸಲು ನಮ್ಮ ಸರ್ಕಾರ ಶ್ರಮಿಸಲಿದೆ ಎಂಬುದು ಜನರ ನಂಬಿಕೆಯಾಗಿದೆ. ಅದನ್ನು ನಾವು ಪೂರೈಸಲು ಇನ್ನಷ್ಟು ಕಷ್ಟಪಡುತ್ತೇವೆ.

ಇದನ್ನೂ ಓದಿ : 'ಡರೋ ಮತ್, ಭಾಗೋ ಮತ್': ಅಮೇಠಿ ಬದಲು ರಾಯ್ ಬರೇಲಿಯಲ್ಲಿ ರಾಹುಲ್​ ಸ್ಪರ್ಧೆಗೆ ಮೋದಿ ಲೇವಡಿ - Narendra Modi Campaign

Last Updated : May 5, 2024, 10:47 PM IST

ABOUT THE AUTHOR

...view details