ಹೈದರಾಬಾದ್: ತೆಲುಗು ನಟ ಅಲ್ಲು ಅರ್ಜುನ್ ಬಂಧಿಸಿರುವುದನ್ನು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಬಿಆರ್ಎಸ್ ಖಂಡಿಸಿದ್ದು, ತೆಲಂಗಾಣದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಪ್ರಖ್ಯಾತ ಸ್ಟಾರ್ ನಟನೊಬ್ಬನೊಂದಿಗೆ ಸರ್ಕಾರ ನಡೆದುಕೊಂಡಿರುವ ರೀತಿ ಸರಿಯಲ್ಲ ಎಂದು ಅವು ಹೇಳಿವೆ.
ಅಲ್ಲು ಅರ್ಜುನ್ ಅವರೊಂದಿಗೆ ಇನ್ನಷ್ಟು ಉತ್ತಮವಾಗಿ ವ್ಯವಹರಿಸಬಹುದಿತ್ತು ಎಂದು ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಹೇಳಿದ್ದರೆ, ಖ್ಯಾತ ನಟನನ್ನು ಸಾಮಾನ್ಯ ಕ್ರಿಮಿನಲ್ಗಳಂತೆ ನಡೆಸಿಕೊಂಡಿರುವುದು ಸರಿಯಲ್ಲ ಎಂದು ಬಿಆರ್ಎಸ್ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಂಡಿ ಸಂಜಯ್ ಕುಮಾರ್, "ರಾಷ್ಟ್ರ ಪ್ರಶಸ್ತಿ ವಿಜೇತ ನಟನಿಗೆ ಬಟ್ಟೆ ಬದಲಾಯಿಸಲು ಸಹ ಸಮಯ ನೀಡದೆ ನೇರವಾಗಿ ಅವರ ಬೆಡ್ ರೂಮ್ನಿಂದ ಅವರನ್ನು ಬಂಧಿಸಿಕೊಂಡು ಬರಲಾಗಿದೆ. ಭಾರತೀಯ ಚಿತ್ರರಂಗಕ್ಕೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟ ನಟನೊಂದಿಗೆ ಉತ್ತಮವಾಗಿ ವರ್ತಿಸಬೇಕಿತ್ತು. ಇದು ದುರಾಡಳಿತ ಮತ್ತು ಅಗೌರವದ ಹಾಗೂ ನಾಚಿಕೆಗೇಡಿನ ಕೃತ್ಯ" ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಅಲ್ಲು ಅರ್ಜುನ್ ಅವರ 'ಪುಷ್ಪ 2' ಬಿಡುಗಡೆಯಾದ ಸಂಧ್ಯಾ ಚಿತ್ರಮಂದಿರದಲ್ಲಿ ಮಹಿಳೆಯೊಬ್ಬರ ದುರಂತ ಸಾವು ತೀವ್ರ ದುರದೃಷ್ಟಕರ ಎಂದು ಹೇಳಿದ ಸಚಿವ ಬಂಡಿ, ಈ ಘಟನೆಯು ಭಾರಿ ಜನಸಂದಣಿಯನ್ನು ನಿರ್ವಹಿಸುವಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಎತ್ತಿತೋರಿಸುತ್ತದೆ ಎಂದರು.