ತೆಜ್ಪುರ: ಭಾರತ- ಮ್ಯಾನ್ಮಾರ್ ಗಡಿಯಲ್ಲಿ 3,100 ಕೋಟಿ ರೂ ವೆಚ್ಚದಲ್ಲಿ ಮುಳ್ಳುತಂತಿ ಬೇಲಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಸ್ವಾಗತಾರ್ಹ ಎಂದು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೈಶಮ್ ಮೇಘಚಂದ್ರ ಸಿಂಗ್ ತಿಳಿಸಿದ್ದಾರೆ. ರಾಜ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪನೆಗೆ ಈ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸುವಂತೆ ಕೇಂದ್ರಕ್ಕೆ ಅವರು ಒತ್ತಾಯಿಸಿದ್ದಾರೆ.
ಗಡಿಯಲ್ಲಿ ಯಾವುದೇ ಅಡೆತಡೆ ಇಲ್ಲದಿರುವುದೇ ಇಷ್ಟಕ್ಕೆಲ್ಲ ಕಾರಣ:ಎರಡು ಗಡಿಗಳ ನಡುವೆ ಅಡೆತಡೆ ಇಲ್ಲದಿರುವುದರಿಂದ 2023ರ ಮೇನಿಂದ ಈಶಾನ್ಯ ರಾಜ್ಯಗಳು ಕೊತ ಕೊತ ಎನ್ನುತ್ತಿವೆ. ಎರಡು ಸಮುದಾಯಗಳ ನಡುವೆ ಸಂಘರ್ಷಗಳು ಆರಂಭವಾಗಿದ್ದು, ಇದು 200 ಜನರ ಸಾವಿಗೆ ಹಾಗೂ ಸಾವಿರಾರು ಜನರ ಸ್ಥಳಾಂತರಕ್ಕೂ ಕಾರಣವಾಗಿದೆ. ಎರಡು ದೇಶದ ನಡುವೆ ಗಡಿಯಲ್ಲಿ ಬೇಲಿ ಇಲ್ಲದಿರುವುದು ಹಿಂಸಾಚಾರಕ್ಕೆ ಪ್ರಮುಖ ಕಾರಣವಾಗಿದೆ.
ಮ್ಯಾನ್ಮಾರ್ ಜೊತೆಗೆ ಭಾರತವೂ 1643 ಕಿ.ಮೀ ಅಂತಾರಾಷ್ಟ್ರೀಯ ಗಡಿ ಹಂಚಿಕೊಂಡಿದ್ದು, ಇದರಲ್ಲಿ ಅರುಣಾಚಲ ಪ್ರದೇಶ 520 ಕಿ.ಮೀ, ನಾಗಾಲ್ಯಾಂಡ್ 215 ಕಿ.ಮೀ, ಮಣಿಪುರ್ 398 ಕಿ.ಮೀ, ಮಿಜೋರಾಂನಲ್ಲಿ 510 ಕಿ.ಮೀ ಗಡಿ ಹೊಂದಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿ ತಂತಿಬೇಲಿ ಇಲ್ಲದಿರುವುದು ಮಣಿಪುರ ಹಿಂಸಾಚಾರಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮೇಘಚಂದ್ರ ಅಭಿಪ್ರಾಯಪಟ್ಟಿದ್ದಾರೆ. ಎರಡು ಗಡಿಗಳಲ್ಲಿ ಅಕ್ರಮ ವಲಸೆ ನಿಯಂತ್ರಣ ಸಾಧ್ಯವಾಗಿಲ್ಲ. ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವೂ ಅಂತಾರಾಷ್ಟ್ರೀಯ ಗಡಿ ಜೊತೆಗೆ ತಂತಿ ಬೇಲಿ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಕಂಕಪ್ಕಿ ಮೊರೆ ಮತ್ತು ಚುರಚಂದಪುರ ಗಡಿ ಪ್ರದೇಶಗಳಿಂದ ಮಣಿಪುರಕ್ಕೆ ಅಕ್ರಮ ವಲಸಿಗರು ಒಳನುಸುಳಿ ಉಗ್ರಗಾಮಿ ಚಟುವಟಿಕೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಗಡಿ ಬೇಲಿ ನಿರ್ಮಾಣ ಕಾರ್ಯ ಆದಷ್ಟು ಬೇಗ ಪೂರ್ಣಗೊಳಿಸಬೇಕು. ನೆರೆಯ ಮ್ಯಾನ್ಮಾರ್‌ನಲ್ಲಿನ ಪರಿಸ್ಥಿತಿ ಅಸ್ಥಿರತೆಯು ಕೂಡ ಮಣಿಪುರದ ಮೂಲಕ ಭಾರತಕ್ಕೆ ಒಳನುಸುಳುವಿಕೆಯ ಹೆಚ್ಚಿಸಿವೆ ಎಂದರು.