ಇಡುಕ್ಕಿ (ಕೇರಳ): ಇಲ್ಲಿನ ಪೂಪ್ಪಾರದಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿಗಳಿಗೆ 90 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ದೇವಿಕುಲಂ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಿ ಎ ಸಿರಾಜುದ್ದೀನ್ ಅವರು ಸುಗಂಧ್, ಶಿವಕುಮಾರ್ ಮತ್ತು ಸ್ಯಾಮ್ಯುಯೆಲ್ ಅವರಿಗೆ 90 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 40,000 ರೂಪಾಯಿಗಳ ದಂಡವನ್ನು ಪಾವತಿಸುವಂತೆ ಆದೇಶಿಸಿದ್ದಾರೆ.
ಈ ಮೊತ್ತವನ್ನು ಬಾಲಕಿಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಸೂಚಿಸಿದೆ. ದಂಡ ಪಾವತಿಸದಿದ್ದರೆ, ಅವರು ಇನ್ನೂ ಎಂಟು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರು ಅಪ್ರಾಪ್ತ ವಯಸ್ಕರ ಪ್ರಕರಣ ತೊಡುಪುಳ ಬಾಲಾಪರಾಧಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ಘಟನೆ ಹಿನ್ನೆಲೆ ಏನು?: ಮೇ, 2022ರಲ್ಲಿ ಇಡುಕ್ಕಿಯ ಪೂಪ್ಪಾರದಲ್ಲಿ ತನ್ನ ಸ್ನೇಹಿತನೊಂದಿಗೆ ಚಹಾ ತೋಟಕ್ಕೆ ಬಂದಿದ್ದ, ಬೇರೆ ರಾಜ್ಯದ 14 ವರ್ಷದ ಬಾಲಕಿಯ ಮೇಲೆ ಪೂಪ್ಪಾರ ಮೂಲದ ಆರೋಪಿಗಳು ಅತ್ಯಾಚಾರ ಎಸಗಿದ್ದರು ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಲಕಿಯ ಸ್ನೇಹಿತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಕೃತ್ಯದಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ಆರು ಮಂದಿ ಆರೋಪಿಗಳು ಭಾಗಿಯಾಗಿದ್ದರು. ಈ ಪೈಕಿ ನ್ಯಾಯಾಲಯವು ನಾಲ್ಕನೇ ಆರೋಪಿಯನ್ನು ಖುಲಾಸೆಗೊಳಿಸಿತ್ತು.
ಘಟನೆ ನಡೆದ ದಿನ, ಬಾಲಕಿಯ ಸ್ನೇಹಿತ ಹಾಗೂ ವಲಸೆ ಕಾರ್ಮಿಕ ಮಹೇಶ್ ಕುಮಾರ್ ಯಾದವ್ ಬಾಲಕಿಯನ್ನು ಕೋಣೆಗೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದ. ನಂತರ ಬಾಲಕಿಯನ್ನು ತನ್ನ ಇನ್ನೊಬ್ಬ ಸ್ನೇಹಿತ ಖೇಮ್ ಸಿಂಗ್ನೊಂದಿಗೆ ಆಕೆಯ ನಿವಾಸಕ್ಕೆ ಕಳುಹಿಸಿಕೊಟ್ಟಿದ್ದ. ಆದರೆ ಅವನೂ ಪೂಪ್ಪಾರಕ್ಕೆ ಬಂದು ಬಾಲಕಿಗೆ ಮದ್ಯ ಕುಡಿಸಿ ಕಿರುಕುಳ ನೀಡಿದ್ದ. ಈ ಸಮಯದಲ್ಲಿ ಆರು ಆರೋಪಿಗಳು ಖೇಮ್ ಸಿಂಗ್ ಮೇಲೆ ಹಲ್ಲೆ ನಡೆಸಿ ನಂತರ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಮಹೇಶ್ ಕುಮಾರ್ ಯಾದವ್ ಮತ್ತು ಖೇಮ್ ಸಿಂಗ್ ವಿರುದ್ಧದ ಪ್ರಕರಣ ದೇವಿಕುಲಂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಇದನ್ನೂ ಓದಿ:ಮೈಸೂರು: ಅಪ್ರಾಪ್ತೆ ಮೇಲೆ ಅತ್ಯಾಚಾರ - ಮಲ ತಂದೆಗೆ 30 ವರ್ಷ ಕಠಿಣ ಜೈಲು ಶಿಕ್ಷೆ