ಬ್ರಾಂಪ್ಟನ್(ಕೆನಡಾ):ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಅಟ್ಟಹಾಸ ಖಂಡಿಸಿ ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ಮಂದಿರದ ಹೊರಗೆ ಸಾವಿರಕ್ಕೂ ಹೆಚ್ಚು ಕೆನಡಾದ ಹಿಂದೂಗಳು ಸೋಮವಾರ ಸಂಜೆ (ಸ್ಥಳೀಯ ಕಾಲಮಾನ) ಪ್ರತಿಭಟನೆ ನಡೆಸಿದರು. ಭಾರತ ಮತ್ತು ಕೆನಡಾದ ಧ್ವಜಗಳನ್ನು ಹಿಡಿದು ದೇವಾಲಯದ ಹೊರಗೆ ಜಮಾಯಿಸಿ, ಖಾಲಿಸ್ತಾನಿ ಉಗ್ರರ ವಿರುದ್ಧ ಘೋಷಣೆ ಕೂಗಿದರು. ರಾಜಕಾರಣಿಗಳು ಖಲಿಸ್ತಾನಿಗಳಿಗೆ ಬೆಂಬಲ ನೀಡದಂತೆಯೂ ಆಗ್ರಹಿಸಿದರು.
ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ (CoHNA)ವು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪ್ರತಿಭಟನಾನಿರತರ ವಿಡಿಯೋ ಹಂಚಿಕೊಂಡಿದೆ. "ಹಿಂದೂ ದೇವಾಲಯಗಳ ಮೇಲೆ ಹೆಚ್ಚುತ್ತಿರುವ ಭೀಕರ ದಾಳಿಗಳ ವಿರುದ್ಧ ಪ್ರತಿಭಟಿಸಲು ಬ್ರಾಂಪ್ಟನ್‌ನಲ್ಲಿ ಸಾವಿರಕ್ಕೂ ಹೆಚ್ಚು ಕೆನಡಿಯನ್ ಹಿಂದೂಗಳು ಜಮಾಯಿಸಿದ್ದರು. ಪವಿತ್ರ ದೀಪಾವಳಿಯ ವಾರಾಂತ್ಯದಲ್ಲಿ ಕೆನಡಾದ ಹಿಂದೂ ದೇವಾಲಯಗಳ ಮೇಲೆ ಖಾಲಿಸ್ತಾನಿ ಉಗ್ರರು ನಡೆಸಿದ ದಾಳಿ ಬಹಳ ಕ್ರೂರತನದ್ದು. ಇಂಥ ದಾಳಿಯನ್ನು ತಡೆಗಟ್ಟುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇವೆ" ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಸೇರಿ ಹಲವರಿಗೆ ಪೋಸ್ಟ್ ಅನ್ನು ಟ್ಯಾಗ್ ಮಾಡಲಾಗಿದೆ.
ಈದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ತೀವ್ರವಾಗಿ ಖಂಡಿಸಿದ್ದಾರೆ. ಇದನ್ನು ಉದ್ದೇಶಪೂರ್ವಕ ಕೃತ್ಯ ಎಂದು ಕರೆದಿರುವ ಅವರು, ಭಾರತೀಯ ರಾಯಭಾರಿಗಳನ್ನು ಬೆದರಿಸುವ ಪ್ರಯತ್ನ ಎಂದಿದ್ದಾರೆ. ಅಲ್ಲದೇ ಕಾನೂನು ಸುವ್ಯವಸ್ಥೆಯನ್ನು ಎತ್ತಿಹಿಡಿಯುವಂತೆ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇಂಥ ದಾಳಿಗಳು ಭಾರತದ ಸಂಕಲ್ಪವನ್ನು ಎಂದಿಗೂ ದುರ್ಬಲಗೊಳಿಸುವುದಿಲ್ಲ- ಮೋದಿ: ದಾಳಿ ಬೆನ್ನಲ್ಲೇ, ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮೋದಿ, "ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲಿನ ಉದ್ದೇಶಪೂರ್ವಕ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ನಮ್ಮ ರಾಯಭಾರಿಗಳನ್ನು ಬೆದರಿಸುವ ಹೇಡಿತನದ ಪ್ರಯತ್ನ ನಡೆದಿದೆ. ಇಂತಹ ಹಿಂಸಾಚಾರಗಳು ಭಾರತದ ಸಂಕಲ್ಪವನ್ನು ಎಂದಿಗೂ ದುರ್ಬಲಗೊಳಿಸುವುದಿಲ್ಲ. ಕೆನಡಾದ ಸರ್ಕಾರ ನ್ಯಾಯವನ್ನು ಖಾತ್ರಿಪಡಿಸಿ, ಕಾನೂನಿನ ನಿಯಮವನ್ನು ಎತ್ತಿಹಿಡಿಯುತ್ತದೆ ಎಂಬ ನಿರೀಕ್ಷೆಯಿದೆ" ಎಂದಿದ್ದಾರೆ.
ಖಲಿಸ್ತಾನ್ ಪರ ಪ್ರತಿಭಟನೆ- ಪೊಲೀಸ್ ಅಧಿಕಾರಿ ಅಮಾನತು: ಖಲಿಸ್ತಾನ್ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆನಡಾದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ. ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದ ಹೊರಗೆ ಈ ಪೊಲೀಸ್ ಅಧಿಕಾರಿ ಖಲಿಸ್ತಾನ್ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬೆನ್ನಲ್ಲೇ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಅಮಾನತುಗೊಳಿಸಿದ ಅಧಿಕಾರಿ ಸೋಹಿ ಪೀಲ್ ಪ್ರಾದೇಶಿಕ ಪೊಲೀಸ್ ಇಲಾಖೆಯ ಸಾರ್ಜೆಂಟ್ ಆಗಿದ್ದರು. ಸಮುದಾಯದ ಸುರಕ್ಷತೆ ಮತ್ತು ಪೊಲೀಸ್ ಕಾಯಿದೆಯ ಪ್ರಕಾರ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಖಲಿಸ್ತಾನಿ ಉಗ್ರರ ದಾಳಿ ಪ್ರಕರಣ:ಬ್ರಾಂಪ್ಟನ್‌ನಲ್ಲಿ ಭಾನುವಾರ ಹಿಂದೂ ಮಹಾಸಭಾ ಮಂದಿರವು ದೇಗುಲದ ಹೊರಭಾಗದಲ್ಲಿ ರಾಯಭಾರ ಕಚೇರಿ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಹಿಂದೂಗಳು ನೆರೆದಿದ್ದರು. ಈ ವೇಳೆ ಖಲಿಸ್ತಾನಿ ಧ್ವಜ, ಬ್ಯಾನರ್ ಹಿಡಿದು ಘೋಷಣೆ ಕೂಗುತ್ತಾ ಬಂದ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಗುಂಪು, ಇದ್ದಕ್ಕಿದ್ದಂತೆ ಹಿಂದೂಗಳ ಮೇಲೆ ದಾಳಿ ನಡೆಸಿ ಅವರನ್ನು ಅಟ್ಟಾಡಿಸಿದ್ದಾರೆ. ಎರಡೂ ಗುಂಪುಗಳ ನಡುವೆ ಕಾದಾಟ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಧಾನಿ ಜಸ್ಟಿನ್ ಟ್ರುಡೊ ಸೇರಿದಂತೆ ಹಲವರು ದಾಳಿಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: ಕೆನಡಾದಲ್ಲಿ ಹಿಂದೂ ದೇವಾಲಯ, ಭಕ್ತರ ಮೇಲೆ ಖಲಿಸ್ತಾನಿಗಳ ದಾಳಿ: ಪ್ರಧಾನಿ ಟ್ರುಡೊ ಸೇರಿ ಹಲವರ ಖಂಡನೆ