ನವದೆಹಲಿ:ರಾಷ್ಟ್ರ ರಾಜಧಾನಿ ಭಾರೀ ಚಳಿಯಿಂದ ನಡುಗುತ್ತಿದೆ. ದೆಹಲಿಯಲ್ಲಿ ಗುರುವಾರ ಕನಿಷ್ಠ ತಾಪಮಾನ 4.5 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದ್ದು, ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ. ದೆಹಲಿಯಲ್ಲಿ ಶೀತ ಪರಿಸ್ಥಿತಿಯ ಜೊತೆಗೆ ಶುಭ್ರ ಆಕಾಶ ಇದ್ದು, ಇಂದು ಸಂಜೆ ವೇಳೆಗೆ ಹೊಗೆ ಕಡಿಮೆಯಾಗುವ ಸಾಧ್ಯತೆಗಳಿವೆ. ಗಾಳಿಯು ವಾಯುವ್ಯದೆಡೆಗೆ ಗಂಟೆಗೆ 8 ಕಿಮೀ ವೇಗದಲ್ಲಿ ಬೀಸಲಿದ್ದು, ಮಧ್ಯಾಹ್ನದ ಹೊತ್ತಿಗೆ ಗಂಟೆಗೆ 16 ಕಿ.ಮೀ ವೇಗ ಪಡೆದುಕೊಳ್ಳಲಿದೆ.
ಸಫ್ಧರ್ಗಂಜ್ನಲ್ಲಿ ಕನಿಷ್ಠ ತಾಪಮಾನ 4.5 ಡಿಗ್ರಿ ಸೆಲ್ಸಿಸ್ ದಾಖಲಾದರೆ, ಪಾಲಂನಲ್ಲಿ ಕನಿಷ್ಟ 6.0 ಮತ್ತು ಗರಿಷ್ಠ 20 ಡಿಗ್ರಿ ಸೆಲ್ಸಿಯಸ್ ಇದೆ. ಲೋದಿ ರಸ್ತೆಯಲ್ಲಿ ಕನಿಷ್ಠ 5 ಡಿಗ್ರಿ ಸೆ, ಗರಿಷ್ಠ 23 ಡಿಗ್ರಿ ಸೆ, ಅಯನಗರ್ನಲ್ಲಿ ಕನಿಷ್ಠ 3.8 ಡಿಗ್ರಿ ಸೆ ಮತ್ತು ಗರಿಷ್ಠ 22.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ನಗರದೆಲ್ಲೆಡೆಗೆ ಸಣ್ಣ ಮಂಜಿನ ಹೊದಿಕೆ ಕಂಡು ಬಂದಿದೆ. ದೆಹಲಿಯನ್ನು ಸಂಪೂರ್ಣವಾಗಿ ಈ ಮಂಜಿನ ಹೊದಿಕೆ ಆವರಿಸಿದ್ದು, ಕನಿಷ್ಟ 4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಐಎಂಡಿ ತಿಳಿಸಿದೆ.
ಶೀತದಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ ವಸ್ತುಗಳ ಮೊರೆ ಹೋದ ಜನರು:ದೆಹಲಿಯಲ್ಲಿ ತಾಪಮಾನ ಇಳಿಕೆ ಕಾಣುತ್ತಿದ್ದಂತೆ ಜನರು ಬೆಚ್ಚಗಿನ ಆಶ್ರಯಕ್ಕೆ ಮುಂದಾಗಿದ್ದಾರೆ. ಉತ್ತರ ಭಾರತದೆಲ್ಲೆಡೆ ಶೀತದ ಅಲೆ ಹೆಚ್ಚಲಿದ್ದು, ಡಿಸೆಂಬರ್ 12 ರಿಂದ 16 ರವರೆಗೆ ರಾಜಸ್ಥಾನ, ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ಸೌರಾಷ್ಟ್ರ ಮತ್ತು ಕಚ್, ದೆಹಲಿಯಾದ್ಯಂತ ಶೀತದ ಅಲೆಗಳ ಪರಿಸ್ಥಿತಿಗಳನ್ನು ಊಹಿಸಲಾಗಿದೆ.