ಕರ್ನಾಟಕ

karnataka

ETV Bharat / bharat

ಬಿಆರ್​ಎಸ್​ ತಿರಸ್ಕರಿಸಿದ್ದ ಕೇಂದ್ರದ ಬೆಳೆ ವಿಮೆ ಯೋಜನೆಗೆ ಮರು ಸೇರ್ಪಡೆಗೊಂಡ ತೆಲಂಗಾಣ

ಕೇಂದ್ರದ ಬೆಳೆ ವಿಮೆ ಯೋಜನೆಗೆ ತೆಲಂಗಾಣ ಸರ್ಕಾರ ಮರು ಸೇರ್ಪಡೆಗೊಂಡಿದೆ. 2020 ರಲ್ಲಿ ಬಿಆರ್​ಎಸ್​ ಸರ್ಕಾರ ಇದನ್ನು ರಾಜ್ಯದಲ್ಲಿ ಜಾರಿ ಮಾಡಲು ನಿರಾಕರಿಸಿತ್ತು.

By PTI

Published : Mar 2, 2024, 1:24 PM IST

ಕೇಂದ್ರದ ಬೆಳೆ ವಿಮೆ ಯೋಜನೆ
ಕೇಂದ್ರದ ಬೆಳೆ ವಿಮೆ ಯೋಜನೆ

ಹೈದರಾಬಾದ್:ಮಾಜಿ ಸಿಎಂ ಕೆ.ಚಂದ್ರಶೇಖರ್​ ರಾವ್​ ನೇತೃತ್ವದ ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್​) ಸರ್ಕಾರ ನಿರಾಕರಿಸಿದ್ದ ಕೇಂದ್ರ ಸರ್ಕಾರ ನೀಡುವ ಬೆಳೆ ವಿಮೆ ಯೋಜನೆಗೆ ತೆಲಂಗಾಣ ಸರ್ಕಾರ ಮರುಸೇರ್ಪಡೆಯಾಗಿದೆ. ಮುಂದಿನ ಬೆಳೆ ಹಂಗಾಮಿನಿಂದ ರಾಜ್ಯದ ರೈತರಿಗೆ ಬೆಳೆ ವಿಮೆಯ ಲಾಭ ಸಿಗುವಂತೆ ಮಾಡಲು ತೆಲಂಗಾಣ ಕಾಂಗ್ರೆಸ್​ ಸರ್ಕಾರವು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ರಾಜ್ಯದಲ್ಲಿ ಮರು ಜಾರಿಗೆ ಒಪ್ಪಿಕೊಂಡಿದೆ.

ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಕೃಷಿ ಸಚಿವ ತುಮ್ಮಲ ನಾಗೇಶ್ವರ ರಾವ್ ಅವರು ಶುಕ್ರವಾರ ಪಿಎಂಎಫ್‌ಬಿವೈ ಸಿಇಒ ಮತ್ತು ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ರಿತೇಶ್ ಚೌಹಾಣ್ ಅವರೊಂದಿಗೆ ಸಭೆ ನಡೆಸಿದರು. ತೆಲಂಗಾಣದಲ್ಲಿ 2020 ರಿಂದ ರೈತರ ವಿಮಾ ಯೋಜನೆ ಅನುಷ್ಠಾನ ಮತ್ತು ನಂತರ ರಾಜ್ಯವು ಅದರಿಂದ ಹಿಂದೆ ಸರಿದ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಕೃಷಿಯಲ್ಲಿನ ಸಂಕಷ್ಟಗಳಿಂದ ರೈತರನ್ನು ರಕ್ಷಿಸಲು ರಾಜ್ಯ ಸರ್ಕಾರವು, ಕೇಂದ್ರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಅನ್ನು ಮತ್ತೊಮ್ಮೆ ಅಳವಡಿಸಿಕೊಂಡಿದೆ ಎಂದು ರಾಜ್ಯ ಸರ್ಕಾರ ಶುಕ್ರವಾರ ಪ್ರಕಟಣೆ ಹೊರಡಿಸಿದೆ.

ಬೆಳೆ ಹಂಗಾಮಿನಲ್ಲಿ ರೈತರಿಗೆ ಬೆಂಬಲ ನೀಡುವ ಮೂಲಕ ಕೃಷಿ ಕ್ಷೇತ್ರವನ್ನು ಬಲಪಡಿಸುವುದು ತಮ್ಮ ಸರ್ಕಾರದ ಮುಖ್ಯ ಉದ್ದೇಶ. ಹೀಗಾಗಿ ಕೇಂದ್ರ ಸರ್ಕಾರದ ಯೋಜನೆಯನ್ನು ಮರು ಒಪ್ಪಿಕೊಂಡು ರಾಜ್ಯದಲ್ಲಿ ಜಾರಿಗೆ ಸೂಚಿಸಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಬೇಕು ಎಂದು ಸಿಎಂ ರೇವಂತ್ ರೆಡ್ಡಿ ಹೇಳಿದರು. ರೈತರ ಇಳುವರಿಗೆ ವಿಮೆ ಸೇವೆಯಾಗಿ 2016 ರಲ್ಲಿ ಪಿಎಂಎಫ್‌ಬಿವೈ ಯೋಜನೆಯನ್ನು ಕೇಂದ್ರವು ಪ್ರಾರಂಭಿಸಿತ್ತು.

ಎಲಿವೇಟೆಡ್​ ಕಾರಿಡಾರ್​ ನಿರ್ಮಾಣಕ್ಕೆ ಪ್ರಸ್ತಾವ:ಈ ನಡುವೆ ಹೈದರಾಬಾದ್-ನಾಗ್ಪುರ ರಾಷ್ಟ್ರೀಯ ಹೆದ್ದಾರಿ ಮತ್ತು ಹೈದರಾಬಾದ್-ಕರೀಂನಗರ ಹೆದ್ದಾರಿ ಮೇಲೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ರಕ್ಷಣಾ ಸಚಿವಾಲಯ ಅನುಮೋದಿಸಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಹೈದರಾಬಾದ್‌ನಲ್ಲಿ ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ರಕ್ಷಣಾ ಸಚಿವಾಲಯವು ಅನುಮತಿ ನೀಡಿದೆ. ರೇವಂತ್ ರೆಡ್ಡಿ ಅವರು ಜನವರಿ 5 ರಂದು ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ರಕ್ಷಣಾ ಇಲಾಖೆಯ ಭೂಮಿಯಲ್ಲಿ ಎಲಿವೇಟೆಡ್ ಕಾರಿಡಾರ್‌ಗಳ ಅಭಿವೃದ್ಧಿಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು.

ಇದನ್ನೂ ಓದಿ:ತಿರುಚಿದ ವಿಡಿಯೋ ಶೇರ್​​​: ಖರ್ಗೆ, ಜೈರಾಮ್​ ರಮೇಶ್​ಗೆ​ ನಿತಿನ್​ ಗಡ್ಕರಿ ಲೀಗಲ್ ನೋಟಿಸ್​

ABOUT THE AUTHOR

...view details