ಹೈದರಾಬಾದ್: ಭಾರಿ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ತೆಲಂಗಾಣ ಜನರ ನೆರವಿಗೆ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ 1 ಕೋಟಿ ರೂಪಾಯಿ ನೀಡಿದ್ದಾರೆ. ಇಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿದರು.
ತೆಲುಗು ರಾಜ್ಯಗಳಲ್ಲಿ ಪ್ರವಾಹ ಪರಿಹಾರ ಕಾರ್ಯಕ್ಕಾಗಿ ವೈಯಕ್ತಿಕವಾಗಿ 6 ಕೋಟಿ ರೂ. ನೀಡುತ್ತಿದ್ದೇನೆ. ಇದರಲ್ಲಿ ಆಂಧ್ರ, ತೆಲಂಗಾಣ ಸಿಎಂ ಪರಿಹಾರ ನಿಧಿಗೆ ತಲಾ 1 ಕೋಟಿ ರೂಪಾಯಿ ಮತ್ತು ಪ್ರವಾಹ ಪೀಡಿತ ಗ್ರಾಮ ಪಂಚಾಯಿತಿಗಳಿಗೆ 4 ಕೋಟಿ ರೂ. ನೀಡುವುದಾಗಿ ಈ ಹಿಂದೆ ಪವನ್ ಘೋಷಿಸಿದ್ದರು.
ರಾಜ್ಯದ ಖಮ್ಮಂ, ಮೆಹಬೂಬ್ ನಗರ, ಸೂರ್ಯಪೇಟ್ ಮತ್ತು ಇತರೆ ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ 26 ಜನರು ಸಾವನ್ನಪ್ಪಿದ್ದು, ಅನೇಕರು ನಿರಾಶ್ರಿತರಾಗಿದ್ದರು. ಮನೆ, ಕೃಷಿ, ನೀರಾವರಿ ಟ್ಯಾಂಕ್ ಮತ್ತು ವಿದ್ಯುತ್ ಕಂಬಗಳು ಸೇರಿದಂತೆ ಅಪಾರ ಆಸ್ತಿ ಹಾನಿಯಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, 5,438 ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಸರ್ಕಾರ ತಿಳಿಸಿದೆ.
ಪ್ರವಾಹ ಪರಿಶೀಲನೆಗೆ ಇಂದು ಕೇಂದ್ರ ತಂಡ:ತೆಲಂಗಾಣದಲ್ಲಿ ಹಾನಿ ಪರಿಶೀಲನೆಗೆ ಇಂದು ಆರು ಸದಸ್ಯರ ಕೇಂದ್ರ ತಂಡ ಆಗಮಿಸಲಿದೆ. ಕರ್ನಲ್ ಕೀರ್ತಿ ಪ್ರತಾಪ್ ಸಿಂಗ್ ನೇತೃತ್ವದ ಈ ತಂಡ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಅವರನ್ನು ಭೇಟಿಯಾಗಲಿದೆ.