ಹೈದರಾಬಾದ್ :ಒಂದೆಡೆಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನ ಬಳಿಕ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ರಾಜಕೀಯದ ಚರ್ಚೆ ಜೋರಾಗಿದೆ. ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ಅಂತಿಮ ವಿಧಿವಿಧಾನ ಜರುಗಿದ ದೆಹಲಿಯ ನಿಗಮಬೋಧ್ ಘಾಟ್‌ನಲ್ಲೇ ಮೆಮೋರಿಯಲ್ ನಿರ್ಮಾಣ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. ಈ ಮಧ್ಯೆ ತೆಲಂಗಾಣ ವಿಧಾನಸಭೆಯಲ್ಲಿ ಸೋಮವಾರ ಸಂತಾಪ ಸೂಚಿಸಲಾಯಿತು. ಆರ್ಥಿಕ ತಜ್ಞನಿಗೆ 'ಭಾರತ ರತ್ನ' ನೀಡಲು ಒತ್ತಾಯಿಸಿ ಕಾಂಗ್ರೆಸ್ ಮಂಡಿಸಿದ ನಿಲುವಳಿಗೆ ಸರ್ವಪಕ್ಷಗಳು ಅವಿರೋಧವಾಗಿ ಒಪ್ಪಿಗೆ ಸೂಚಿಸಿವೆ.
ಸೋಮವಾರ ಬೆಳಗ್ಗೆ 10 ಗಂಟೆಗೆ ವಿಧಾನಸಭೆಯ ಸದನ ಆರಂಭದ ಬಳಿಕ ಮಾಜಿ ಪ್ರಧಾನಿಯ ನಿಧನಕ್ಕೆ ಸಂತಾಪ ಸೂಚಿಸಲು ಸ್ಪೀಕರ್ ಪ್ರಸಾದ್ ಕುಮಾರ್ ಅವರು ಹೇಳಿದರು. 2 ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.
ಅತ್ಯುನ್ನತ ಗೌರವಕ್ಕಾಗಿ ಒತ್ತಾಯ:ಬಳಿಕ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು, ಮಾಜಿ ಪ್ರಧಾನಿಯ ಸಾಧನೆಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನವನ್ನು ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನಿಲುವಳಿ ಮಂಡಿಸಿದರು. ಈ ನಿರ್ಣಯಕ್ಕೆ ಎಲ್ಲ ವಿಪಕ್ಷಗಳೂ ಒಪ್ಪಿಗೆ ಸೂಚಿಸಿದ್ದರಿಂದ ಅವಿರೋಧವಾಗಿ ಅಂಗೀಕರಿಸಲಾಯಿತು.
ನಿಲುವಳಿ ಮಂಡಿಸಿ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, ಮಾಜಿ ಪ್ರಧಾನಿಯವರ ನಿಧನ ದೇಶಕ್ಕೆ ತುಂಬಲಾರದ ನಷ್ಟ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಜಾರಿಗೆ ತಂದ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ), ಮಾಹಿತಿ ಹಕ್ಕು, ಭೂ ಸ್ವಾಧೀನ ಕಾಯ್ದೆಗಳು ಮಹತ್ತರ ಮೈಲುಗಲ್ಲಾಗಿವೆ ಎಂದು ಬಣ್ಣಿಸಿದರು.