ನವದೆಹಲಿ: ಆಮ್ ಆದ್ಮಿ ಪಕ್ಷದ ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಆರೋಪ ಎದುರಿಸಿತ್ತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಪ್ತ, ಆರೋಪಿ ಬಿಭವ್ ಕುಮಾರ್ ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ಮೇ 13ರಂದು ದೆಹಲಿ ಸಿಎಂ ಕೇಜ್ರಿವಾಲ್ ನಿವಾಸದ ಕ್ಯಾಂಪ್ ಕಚೇರಿಗೆ ಭೇಟಿ ನೀಡಿದಾಗ ತನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 18ರಂದು ಬಿಭವ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇಂದಿಗೆ ರಿಮಾಂಡ್ ಮುಗಿದ ಹಿನ್ನೆಲೆಯಲ್ಲಿ ಪೊಲೀಸರು ಇಲ್ಲಿನ ತೀಸ್ ಹಜಾರಿ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿದ್ದರು.
ಈ ವೇಳೆ, 5 ದಿನಗಳ ಕಾಲ ಕಸ್ಟಡಿ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಮತ್ತೊಂದೆಡೆ, ಬಿಭವ್ ಕುಮಾರ್ ಪರ ವಕೀಲರು ಪೊಲೀಸರ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದರು. ಕಸ್ಟಡಿ ವಿಚಾರಣೆಯನ್ನು ಬಿಭವ್ ಕುಮಾರ್ ಎದುರಿಸಲು ಯಾವುದೇ ಪುರಾವೆಗಳಿಲ್ಲ ಎಂದು ಪ್ರತಿಪಾದಿಸಿದರು. ವಾದ - ಪ್ರತಿವಾದ ಆಲಿಸಿದ ನ್ಯಾಯಾಲಯವು ಕೊನೆಗೆ ಮೂರು ದಿನಗಳ ರಿಮಾಂಡ್ಗೆ ನೀಡಿ ಆದೇಶಿಸಿದೆ. ನಿನ್ನೆಯಷ್ಟೇ, ಅಂದರೆ ಮೇ 27ರಂದು ನ್ಯಾಯಾಲಯವು ಬಿಭವ್ ಕುಮಾರ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.