ಸಂದೇಶ್‌ಖಾಲಿ (ಪಶ್ಚಿಮ ಬಂಗಾಳ):ಟಿಎಂಸಿ ನಾಯಕರು ಹಾಗೂ ಅವರ ಬೆಂಬಲಿಗರು ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷಗಳು ಕಳೆದ ಕೆಲ ದಿನಗಳಿಂದ ಪ್ರತಿಭಟನೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಸಂದೇಶಖಾಲಿ ಪ್ರವೇಶಿಸದಂತೆ ನಿರ್ಬಂಧ ವಿಧಿಸಿತ್ತು.
ಈ ಸಂಬಂಧ ಕೋರ್ಟ್ ಮೊರೆ ಹೋಗಿದ್ದ ಪ್ರತಿಪಕ್ಷಗಳು, ಸಂತ್ರಸ್ತರನ್ನು ಭೇಟಿ ಮಾಡಲು ಕೋರ್ಟ್ನಿಂದ ಅನುಮತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಆದರೆ, ಕೋಲ್ಕತ್ತಾ ಹೈಕೋರ್ಟ್‌ನ ಆದೇಶದ ಹೊರತಾಗಿಯೂ ರಾಜ್ಯದ ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಗೆ ಹೋಗದಂತೆ ತಮ್ಮನ್ನು ಪೊಲೀಸರು ತಡೆಯಲಾಗಿದೆ ಎಂದು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮಂಗಳವಾರ ಆರೋಪಿಸಿದ್ದಾರೆ. ಮತ್ತೊಂದು ಕಡೆ ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಹಿರಿಯ ನಾಯಕಿ ವೃಂದಾ ಕಾರಟ್ ಅವರನ್ನು ಸಂದೇಶಖಾಲಿಗೆ ಭೇಟಿ ನೀಡುವುದನ್ನು ಪೊಲೀಸರು ತಡೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುವೇಂದು ಅಧಿಕಾರಿ, ಪೊಲೀಸರು ಕೋಲ್ಕತ್ತಾ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ. ಸಂದೇಶಖಾಲಿ ಪ್ರದೇಶದಲ್ಲಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144 ಅನ್ನು ಅನ್ವಯಿಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ಪೀಠದ ಮೊರೆ ಹೋಗಿದೆ. ಇಲ್ಲಿ ಪ್ರತಿಭಟನೆ ಮಾಡಿದ ನಂತರ ನ್ಯಾಯಾಲಯದ ಮೊರೆ ಹೋಗುತ್ತೇವೆ'' ಎಂದು ಅವರು ಇದೇ ವೇಳೆ ಹೇಳಿದರು. ಈ ನಡುವೆ ಕೋಲ್ಕತ್ತಾ ದ್ವಿಸದಸ್ಯ ಪೀಠವು ಸಂದೇಶ್ಖಾಲಿಗೆ ಭೇಟಿ ನೀಡಲು ಅನುಮತಿ ನೀಡಿದೆ.