ಹೈದರಾಬಾದ್:ಇಲ್ಲಿನ ಮೂಸಿ ನದಿಪಾತ್ರದಲ್ಲಿ ಅಕ್ರಮವಾಗಿ ಕಟ್ಟಲಾದ ಮನೆಗಳು ಮತ್ತು ಇತರೆ ಕಟ್ಟಡಗಳ ತೆರವಿಗೆ ಮೂಸಿ ರಿವರ್ಫ್ರಂಟ್ ಡೆವಲಪ್‌ಮೆಂಟ್ ಪ್ರಾಜೆಕ್ಟ್ ಅಧಿಕಾರಿಗಳು ಸಮೀಕ್ಷಾ ಕಾರ್ಯಕ್ಕೆ ಮುಂದಾಗಿದ್ದಾರೆ.
ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯ ಬಳಿಕ ನದಿಪಾತ್ರದ ಕುಟುಂಬಗಳಿಗೆ ಪರಿಹಾರ ಕಾರ್ಯ ನಡೆಯಲಿದೆ. ಅವರನ್ನು ಮತ್ತೊಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು. ಮೂಸಿ ರಿವರ್ಫ್ರಂಟ್ ಡೆವಲಪ್‌ಮೆಂಟ್ ಪ್ರಾಜೆಕ್ಟ್ ಅಡಿಯಲ್ಲಿ ರಾಜ್ಯ ಸರ್ಕಾರ ನದಿಪಾತ್ರದ ಬಡ ಕುಟುಂಬಗಳಿಗೆ ಎರಡು ಕೋಣೆಯ ಮನೆ ನಿರ್ಮಾಣ ಮಾಡಲಿದ್ದು ಮತ್ತು ಅರ್ಹ ಬಡವರಿಗೆ ಪುನರ್ವಸತೀಕರಣ ಮಾಡಲಿದೆ ಎಂದು ಸಿಎಂ ರೇವಂತ್ ರೆಡ್ಡಿ ಇತ್ತೀಚಿಗೆ ತಿಳಿಸಿದ್ದರು. ಸರ್ಕಾರದ ಈ ಹೇಳಿಕೆಯ ಬೆನ್ನಲ್ಲೇ ಅಧಿಕಾರಿಗಳು ಸಮೀಕ್ಷೆಗೆ ಮುಂದಾಗಿದ್ದಾರೆ.
ಹೈದರಾಬಾದ್, ರಂಗಾರೆಡ್ಡಿ ಮತ್ತು ಮೆದ್ಚಲ್ ಮಲ್ಕಜ್ಗಿರಿ ಜಿಲ್ಲೆಯಲ್ಲಿನ ಜಲಾನಯನ ಪ್ರದೇಶ ಮತ್ತು ಬಫರ್ ಝೋನ್ನಲ್ಲಿನ ಅತಿಕ್ರಮಣ ಸಮೀಕ್ಷೆ ನಡೆಸಲು ಪೊಲೀಸರೊಂದಿಗೆ ಅಧಿಕಾರಿಗಳು ಆಗಮಿಸಿದ್ದರು. ಈ ವೇಳೆ ಅಧಿಕಾರಿಗಳ ತಂಡ ನದಿತೀರದ ಮತ್ತು ಬಫರ್ ಝೋನ್ನಲ್ಲಿನ ಎಲ್ಲ ಅತಿಕ್ರಮಣ ಕಟ್ಟಡ ವಿನ್ಯಾಸವನ್ನು ಗುರುತಿಸಲಿದ್ದಾರೆ.
ಸಮೀಕ್ಷೆಯು ಲಾಂಗರ್ ಹೌಸ್, ಚಂದೇರ್ಘಾಟ್, ಮುಸಾ ನಗರ್, ಶಂಕರ್ ನಗರ್ ಮತ್ತಿತರ ಪ್ರದೇಶಗಳಲ್ಲಿ ಸಾಗಲಿದೆ. ಒಟ್ಟು 15 ತಂಡಗಳಿಂದ ಸಮೀಕ್ಷೆ ನಡೆಯುತ್ತಿದೆ. ನಾಲ್ಕು ತಂಡ ರಂಗಾರೆಡ್ಡಿ ಜಿಲ್ಲೆಯಲ್ಲಿ ಮತ್ತು ಐದು ತಂಡ ಮೆದ್ಚಲ್ ಮಲ್ಕಜ್ಗಿರಿ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಲಿದೆ. ಈ ವೇಳೆ ಅಧಿಕಾರಿಗಳು ನದಿಪಾತ್ರದ ನಿವಾಸಿಗಳ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ.