ಕರ್ನಾಟಕ

karnataka

ETV Bharat / bharat

ವಾಯು ಗುಣಮಟ್ಟ ಸುಧಾರಣೆ ಸೂಚ್ಯಂಕ: ದೇಶದಲ್ಲಿ ಸೂರತ್​​ ನಂ.1, ಬೆಂಗಳೂರಿನ ಸ್ಥಾನವೆಷ್ಟು? - National Clean Air Programme - NATIONAL CLEAN AIR PROGRAMME

ದೇಶದ ನಗರಗಳ ವಾಯು ಗುಣಮಟ್ಟದ ಆಧಾರದ ಮೇಲೆ ಕೇಂದ್ರ ಪರಿಸರ ಸಚಿವಾಲಯ 'ರಾಷ್ಟ್ರೀಯ ಶುದ್ಧ ಗಾಳಿ ನಗರ' ಪ್ರಶಸ್ತಿಯನ್ನು ಪ್ರಕಟಿಸಿದ್ದು, ಗುಜರಾತ್​​ನ ಸೂರತ್​ ನಗರಕ್ಕೆ ಮೊದಲ ಸ್ಥಾನ ಸಿಕ್ಕಿದೆ.

ವಾಯು ಗುಣಮಟ್ಟ ಸುಧಾರಣೆ ಸೂಚ್ಯಂಕ
ವಾಯು ಗುಣಮಟ್ಟ ಸುಧಾರಣೆ ಸೂಚ್ಯಂಕ (ETV Bharat)

By PTI

Published : Sep 8, 2024, 4:06 PM IST

ನವದೆಹಲಿ:ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದಡಿ ಗುರುತಿಸಿಕೊಂಡಿರುವ 131 ನಗರಗಳ ಪೈಕಿ 91 ನಗರಗಳು ಗಾಳಿಯ ಗುಣಮಟ್ಟದಲ್ಲಿ ಭಾರಿ ಸುಧಾರಣೆ ಕಂಡಿವೆ. 2017-18ಕ್ಕೆ ಹೋಲಿಸಿದರೆ 21 ನಗರಗಳು ಶೇಕಡಾ 40ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಶುದ್ಧ ವಾಯು ಕಾಪಾಡಿಕೊಂಡಿವೆ. ಈ ನಗರಗಳಲ್ಲಿ ಪಿಎಂ10 (ಗಾಳಿಯಲ್ಲಿರುವ ದೂಳು ಮತ್ತು ಅಪಾಯಕಾರಿ ಕಣಗಳನ್ನು ನಿರ್ಧರಿಸುವ ಮಾಪಕ) ಮಟ್ಟ ಕುಸಿದಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ದತ್ತಾಂಶ ತಿಳಿಸಿದೆ.

ವಾಯು ಗುಣಮಟ್ಟ ಸುಧಾರಣೆ ಸೂಚ್ಯಂಕದಲ್ಲಿ ಗುಜರಾತ್​ನ ಸೂರತ್​ ದೇಶದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಮಧ್ಯಪ್ರದೇಶದ ಜಬಲ್​​ಪುರ, ಉತ್ತರ ಪ್ರದೇಶದ ಆಗ್ರಾ ನಂತರದ ಕ್ರಮಾಂಕದಲ್ಲಿವೆ. ಈ ನಗರಗಳು ದೇಶದಲ್ಲಿ ಅತಿ ವೇಗವಾಗಿ ಗಾಳಿಯ ಮಟ್ಟ ಸುಧಾರಣೆ ಕಾಣುತ್ತಿವೆ ಎಂದು ವರದಿ ಹೇಳಿದೆ.

ರಾಜಸ್ಥಾನದ ಜೈಪುರದಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಕೇಂದ್ರ ಪರಿಸರ ಸಚಿವಾಲಯವು ಸ್ವಚ್ಛ ವಾಯು ಸಮೀಕ್ಷೆ 2024ರ "ರಾಷ್ಟ್ರೀಯ ಶುದ್ಧ ಗಾಳಿ ನಗರ" ಪ್ರಶಸ್ತಿ ಪ್ರಕಟಿಸಿದ್ದು, ಈ ಮೂರು ನಗರಗಳಿಗೆ ಮೊದಲ ಮೂರು ಪ್ರಶಸ್ತಿ ಲಭಿಸಿದೆ.

ದೇಶದ 131 ನಗರಗಳ ಪೈಕಿ 18 ನಗರಗಳು ಮಾತ್ರ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿ ಮಾಡಿದ ರಾಷ್ಟ್ರೀಯ ವಾಯು ಗುಣಮಟ್ಟ ಮಾನದಂಡಗಳನ್ನು ಅನುಸರಿಸಿವೆ. 21 ನಗರಗಳು ಶೇಕಡಾ 40ರಷ್ಟು ವಾಯು ಗುಣಮಟ್ಟ ಸುಧಾರಣೆ ಕಂಡಿವೆ. 14 ನಗರಗಳು ಶೇಕಡಾ 30ರಿಂದ 40ರಷ್ಟು ವಾಯು ಶುದ್ಧತೆ ದಾಖಲಿಸಿವೆ.

ಬೆಂಗಳೂರಿನ ಗಾಳಿ ಶುದ್ಧತೆ ಹೇಗಿದೆ?:ಸ್ವಚ್ಛ ವಾಯು ಸಮೀಕ್ಷೆ 2024ರ ಪ್ರಕಾರ, ಕರ್ನಾಟಕದ ರಾಜಧಾನಿ ಬೆಂಗಳೂರು ನಗರ ಶುದ್ಧ ಗಾಳಿಯಲ್ಲಿ ಅಷ್ಟೇನೂ ಉತ್ತಮವಾಗಿಲ್ಲ. ಹೀಗಾಗಿ ನಗರಗಳ ಪೈಕಿ ಯಾವುದೇ ಸ್ಥಾನ ಪಡೆದಿಲ್ಲ. ಪಿಎಂ 10 ಮಟ್ಟದ ಅನುಸಾರ 2017-18 ಸಾಲಿಗಿಂತ ಶೇಕಡಾ 20ರಿಂದ 30 ರಷ್ಟು ಮಾತ್ರ ಸುಧಾರಣೆ ಕಂಡಿದೆ ಎಂದು ಸಿಪಿಸಿಬಿ ದತ್ತಾಂಶ ಹೇಳಿದೆ.

ಸಂಖ್ಯಾವಾರು ನಗರಗಳ ಸ್ಥಾನ:10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಸೂರತ್ (ಗುಜರಾತ್), ಜಬಲ್​ಪುರ್ (ಮಧ್ಯ ಪ್ರದೇಶ) ಮತ್ತು ಆಗ್ರಾ(ಉತ್ತರ ಪ್ರದೇಶ) ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. 3ರಿಂದ 10 ಲಕ್ಷ ಜನಸಂಖ್ಯೆಯ ನಗರಗಳಲ್ಲಿ ಫಿರೋಜಾಬಾದ್ (ಉತ್ತರ ಪ್ರದೇಶ), ಅಮರಾವತಿ (ಮಹಾರಾಷ್ಟ್ರ) ಮತ್ತು ಝಾನ್ಸಿ (ಉತ್ತರ ಪ್ರದೇಶ) ನಗರಗಳು ವಾಯು ಗುಣಮಟ್ಟ ಸುಧಾರಣೆ ಹೊಂದಿವೆ. ಮೂರು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ರಾಯ್​ ಬರೇಲಿ (ಉತ್ತರ ಪ್ರದೇಶ), ನಲ್ಗೊಂಡ (ತೆಲಂಗಾಣ) ಮತ್ತು ನಲಗಢ (ಹಿಮಾಚಲ ಪ್ರದೇಶ) ಮೊದಲ ಸ್ಥಾನದಲ್ಲಿವೆ.

ಸ್ವಚ್ಛ ವಾಯು ಸರ್ವೇಕ್ಷಣ್​​ ಮತ್ತು ರಾಷ್ಟ್ರೀಯ ಶುದ್ಧ ಗಾಳಿ ಯೋಜನೆಯಡಿ ನಗರಗಳಲ್ಲಿನ ಗಾಳಿಯ ಗುಣಮಟ್ಟವನ್ನು ಆಧರಿಸಿ ಕೇಂದ್ರ ಪರಿಸರ ಸಚಿವಾಲಯವು ಶ್ರೇಯಾಂಕವನ್ನು ಪ್ರತಿವರ್ಷ ಪ್ರಕಟಿಸುತ್ತದೆ.

ಇದನ್ನೂ ಓದಿ:70 ವರ್ಷದ ರೈತನ ಪಿತ್ತಕೋಶದಿಂದ 6,000ಕ್ಕೂ ಹೆಚ್ಚು ಕಲ್ಲು ಹೊರತೆಗೆದ ವೈದ್ಯರು! - Gallstones

ABOUT THE AUTHOR

...view details