ಕೋಲ್ಕತ್ತಾ: ಆರ್ಜಿ ಕರ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ ಡೇಟಾ ಎಂಟ್ರಿ ಆಪರೇಟರ್ ಹಾಗೂ ಸಂಸ್ಥೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಆಪ್ತ ಸಹಾಯಕ (ಪಿಎ)ನನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ವಶಕ್ಕೆ ಪಡೆದಿದ್ದಾರೆ.
ಆರ್ಜಿ ಕರ್ ವೈದ್ಯಕೀಯ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾಗಿರುವ ಆರ್ಥಿಕ ಅವ್ಯವಹಾರಗಳ ಹಿನ್ನೆಲೆ ಶುಕ್ರವಾರ ಬೆಳಗ್ಗೆ ಇಡಿ ಅಧಿಕಾರಿಗಳು ಮಾಜಿ ಪ್ರಾಂಶುಪಾಲರಾದ ಸಂದೀಪ್ ಘೋಷ್ ಮತ್ತು ಅವರ ಮೂವರು ಸಹಚರರು ಸೇರಿದಂತೆ ಮನೆ ಸೇರಿದಂತೆ ಹಲವು ಸ್ಥಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ದಕ್ಷಿಣ 24 ಪರಗಣ ಜಿಲ್ಲೆಯ ಸುಭಾಶ್ಗ್ರಾಮಮ್ನ ಡಿಇಒ ಪ್ರಸನ್ನ ಚಟ್ಟೋಪಾಧ್ಯಾಯ ನಿವಾಸದ ಮೇಲೂ ದಾಳಿ ನಡೆಸಲಾಗಿತ್ತು.
ನಾಲ್ಕು ಗಂಟೆಗಳ ಕಾಲ ದಾಳಿ ಮತ್ತು ಶೋಧ ಕಾರ್ಯಾಚರಣೆ ಬಳಿಕ ಇಡಿ ಅಧಿಕಾರಿಗಳು ಚಟ್ಟೋಪಾಧ್ಯಾಯ ಅವರನ್ನು ವಶಕ್ಕೆ ಪಡೆದು, ಕರೆದೊಯ್ದಿದ್ದಾರೆ. ಮೂಲಗಳ ಪ್ರಕಾರ, ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿವರವಾದ ವಿಚಾರಣೆ ಹಿನ್ನೆಲೆ ಆತನನ್ನು ವಶಕ್ಕೆ ಪಡೆಯಲಾಗಿದೆ.
ಆರ್ಜಿ ಕರ್ ವೈದ್ಯಕೀಯ ಕಾಲೇಜಿಗೆ ವಿವಿಧ ವಸ್ತುಗಳ ಪೂರೈಕೆ ಮಾಡುತ್ತಿದ್ದ ಬಿಪ್ಲಬ್ ಸಿನ್ಹಾ ಮತ್ತು ಕೌಶಿಕ್ ಕೊಲೆ ಅವರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಘೋಷ್ ಅವರನ್ನು ಸಿಬಿಐ ಬಂಧಿಸಿದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಅವರ ಪತ್ನಿ ಸಂಗೀತಾ ಘೋಷ್, ನನ್ನ ಗಂಡ ಮುಗ್ದರಾಗಿದ್ದು, ತಪ್ಪಾಗಿ ಅವರನ್ನು ಸಿಕ್ಕಿಸುವ ಪ್ರಯತ್ನ ನಡೆಸಲಾಗಿದೆ. ವಿಚಾರಣೆ ಸಂಪೂರ್ಣವಾಗುವವರೆಗೆ ಅವರನ್ನು ವಿಲನ್ ರೀತಿ ಬಿಂಬಿಸಬೇಡಿ ಎಂದು ಮನವಿ ಮಾಡಿದ್ದಾರೆ.