ಸುಕ್ಮಾ (ಛತ್ತೀಸ್‌ಗಢ): ಛತ್ತೀಸ್‌ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯ ಜಗರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕ್ಸಲರು, ನಲ್ ಜಲ್ ಮಿಷನ್‌ನ ಕಾಮಗಾರಿ ಕಾರ್ಯದಲ್ಲಿ ತೊಡಗಿದ್ದ ನಾಲ್ವರನ್ನು ಅಪಹರಣ ಮಾಡಿರುವ ಘಟನೆ ನಡೆದಿದೆ. ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಜೆಸಿಬಿಯನ್ನೂ ನಕ್ಸಲರು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ. ಅಪಹರಣಕ್ಕೊಳಗಾದವರನ್ನು ಬಿಡುಗಡೆ ಮಾಡುವಂತೆ ಕುಟುಂಬಸ್ಥರು ನಕ್ಸಲ್ ಸಂಘಟನೆಗೆ ಮನವಿ ಮಾಡಿದ್ದಾರೆ. ಆದ್ರೆ, ಬಸ್ತಾರ್ ಪೊಲೀಸರು ಅಪಹರಣವನ್ನು ಖಚಿತಪಡಿಸಿಲ್ಲ.
ನಲ್ ಜಲ್ ಮಿಷನ್‌ನ ಕಾಮಗಾರಿ ಕಾರ್ಯದಲ್ಲಿ ತೊಡಗಿದ್ದ ನಾಲ್ವರ ಕಿಡ್ನಾಪ್: ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಸುಕ್ಮಾ ಜಿಲ್ಲೆಯ ಜಗರಗುಂದ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜಾಪುರ ಮತ್ತು ಸುಕ್ಮಾದ ಗಡಿ ಪ್ರದೇಶದಲ್ಲಿರುವ ಸಿಂಗಾರಂ ಗ್ರಾಮದಲ್ಲಿ ನಲ್ ಜಲ್ ಮಿಷನ್ ಯೋಜನೆಯಡಿ ಕಾಮಗಾರಿ ಕೆಲಸ ನಡೆಯುತ್ತಿದೆ. ಭಾನುವಾರ ಸಂಜೆ, ಶಸ್ತ್ರಸಜ್ಜಿತ ನಕ್ಸಲರು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ತಲುಪಿದ ನಂತರ, ಜೆಸಿಬಿ ಆಪರೇಟರ್, ಗುತ್ತಿಗೆದಾರ ಮತ್ತು ಇಬ್ಬರು ಕಾರ್ಮಿಕರನ್ನು ಅಪಹರಿಸಿದ್ದಾರೆ.