ಇಟಾನಗರ್/ಗುವಾಹಟಿ: ಕಳೆದ ಮೂರು ದಶಕಗಳಲ್ಲಿ ಅರುಣಾಚಲ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಮನದಿಗಳು ಕರಗಿ ಹೋಗಿವೆ ಎಂದು ನಾಗಾಲ್ಯಾಂಡ್ ವಿಶ್ವವಿದ್ಯಾಲಯ ಮತ್ತು ಗುವಾಹಟಿಯ ಕಾಟನ್ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಮಾಡಿದ್ದಾರೆ ಎಂದು ತಜ್ಞರು ಬುಧವಾರ ತಿಳಿಸಿದ್ದಾರೆ.
1.3 ಬಿಲಿಯನ್‌ಗಿಂತ ಹೆಚ್ಚು ಜನರಿಗೆ ಶುದ್ಧ ನೀರಿನ ಮೂಲ: ಸಾಮಾನ್ಯವಾಗಿ 'ಮೂರನೇ ಧ್ರುವ' ಎಂದು ಕರೆಯಲ್ಪಡುವ ಹಿಮಾಲಯವು ಧ್ರುವ ಪ್ರದೇಶಗಳನ್ನು ಹೊರತುಪಡಿಸಿದರೆ ಹಿಮನದಿಗಳ ಅತಿದೊಡ್ಡ ಸಾಂದ್ರತೆಯನ್ನು ಹೊಂದಿದೆ. ಈ ಹಿಮನದಿಗಳು ಕೆಳಭಾಗದಲ್ಲಿ ವಾಸಿಸುವ 1.3 ಬಿಲಿಯನ್‌ಗಿಂತ ಹೆಚ್ಚು ಜನರಿಗೆ ಶುದ್ಧ ನೀರಿನ ಮೂಲವಾಗಿವೆ.
ಇತ್ತೀಚಿನ ದಶಕಗಳಲ್ಲಿ ಹಿಮನದಿಗಳು ಕ್ಷಿಪ್ರವಾಗಿ ಕಣ್ಮರೆಯಾಗುತ್ತಿರುವುದು ದೀರ್ಘಕಾಲದಲ್ಲಿ ನೀರಿನ ಕೊರತೆಯಾಗುವ ಮತ್ತು ಪರಿಸರದಲ್ಲಿ ಅಸಮತೋಲನ ಉಂಟಾಗುವ ಬಗ್ಗೆ ಆತಂಕ ಮೂಡಿಸಿದೆ. ನಾಗಾಲ್ಯಾಂಡ್ ವಿಶ್ವವಿದ್ಯಾಲಯದ ಲಾಟೊಂಗ್ಲಿಲಾ ಜಮೀರ್ ಮತ್ತು ಕಾಟನ್ ವಿಶ್ವವಿದ್ಯಾಲಯದ ನಬಜಿತ್ ಹಜಾರಿಕಾ ಅವರ ನೇತೃತ್ವದಲ್ಲಿ ನಾಗಾಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಾದ ವಿಮ್ಹಾ ರಿಟ್ಸೆ ಮತ್ತು ಅಮೆನುವೊ ಸುಸಾನ್ ಕುಲ್ನು ಈ ಸಂಶೋಧನೆಯ ನೇತೃತ್ವ ವಹಿಸಿದ್ದರು. ಈ ಅಧ್ಯಯನ ವರದಿಯು ಪ್ರಸಿದ್ಧ ಪೀರ್-ರಿವ್ಯೂಡ್ (peer-reviewed) 'ಜರ್ನಲ್ಸ್'ನಲ್ಲಿ ಪ್ರಕಟವಾಗಿದೆ.
ಸಮುದ್ರ ಮಟ್ಟದಿಂದ 4,500ರಿಂದ 4,800 ಮೀ ಎತ್ತರದಲ್ಲಿವೆ ಹಿಮನದಿಗಳು: ಪೂರ್ವ ಹಿಮಾಲಯದ ಹವಾಮಾನದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿರುವುದನ್ನು ಸಂಶೋಧನೆಗಳು ತೋರಿಸಿವೆ. ಅಧ್ಯಯನದ ಬಗ್ಗೆ ವಿವರಿಸಿದ ನಾಗಾಲ್ಯಾಂಡ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ (ಲುಮಾಮಿ ಕ್ಯಾಂಪಸ್) ಸಹಾಯಕ ಪ್ರಾಧ್ಯಾಪಕ ಜಮೀರ್, "1988ರಿಂದ 2020ರವರೆಗೆ ಅರುಣಾಚಲ ಪ್ರದೇಶದ ಹಿಮನದಿಗಳಲ್ಲಾಗಿರುವ ಬದಲಾವಣೆಗಳನ್ನು ವಿಶ್ಲೇಷಿಸಲು ರಿಮೋಟ್ ಸೆನ್ಸಿಂಗ್ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಗಳನ್ನು (ಜಿಐಎಸ್) ಬಳಸಲಾಗಿದೆ. ಈ ಪ್ರದೇಶದ ಬಹುತೇಕ ಹಿಮನದಿಗಳು ಸಮುದ್ರ ಮಟ್ಟದಿಂದ 4,500 ರಿಂದ 4,800 ಮೀಟರ್ ಎತ್ತರದಲ್ಲಿವೆ" ಎಂದು ಹೇಳಿದರು.