ಜೈಪುರ (ರಾಜಸ್ಥಾನ): ಇಲ್ಲಿನಉತ್ಕರ್ಷ್ ಕೋಚಿಂಗ್ ಸೆಂಟರ್‌ನಲ್ಲಿ ಅನಿಲ ಸೋರಿಕೆಯಾಗಿ ವಿದ್ಯಾರ್ಥಿಗಳು ಪ್ರಜ್ಞೆ ತಪ್ಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡಿರುವ ಉಳಿದ ವಿದ್ಯಾರ್ಥಿಗಳು ಸಂಸ್ಥೆಯನ್ನೇ ಸೀಲ್ ಮಾಡಬೇಕೆಂದು ಭಾನುವಾರ ಪ್ರತಿಭಟನೆ ನಡೆಸಿ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಘಟನೆ ಬಗ್ಗೆ ಜಿಲ್ಲಾಡಳಿತ ಹೇಳುವುದೇನು?:ಈ ಬಗ್ಗೆ ಇಲ್ಲಿನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೇಶ್ ಜಾಖರ್, "ಇಲ್ಲಿ ಈ ಉತ್ಕರ್ಷ್ ಕೋಚಿಂಗ್ ಸೆಂಟರ್ ಇದೆ. ಕೆಲ ವಿದ್ಯಾರ್ಥಿಗಳು ಪ್ರಜ್ಞೆ ತಪ್ಪಿದ್ದು ಅವರನ್ನು ತಕ್ಷಣ ಜೈಪುರದ ಸೋಮಾನಿ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕರೆದೊಯ್ಯಲಾಯಿತು. ನಮ್ಮ ಎಡಿಎಂ ಮೇಡಂ ಕೂಡ ಆಸ್ಪತ್ರೆಯಲ್ಲಿ ಇದ್ದಾರೆ. ಘಟನೆ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ನಾನು ಅವರೊಂದಿಗೆ ಮಾತನಾಡಿದ್ದೇನೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗುವುದು" ಎಂದು ತಿಳಿಸಿದ್ದಾರೆ.
ಸಂಸದ ಮಂಜು ಶರ್ಮಾ ಹೇಳಿದ್ದಿಷ್ಟು:ಜೈಪುರ ಸಂಸದ ಮಂಜು ಶರ್ಮಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ. "ಕೋಚಿಂಗ್ ಸೆಂಟರ್‌ನಲ್ಲಿ ಗ್ಯಾಸ್ ಸಂಬಂಧಿತ ಸಮಸ್ಯೆಯಿಂದ ಸುಮಾರು 4-5 ವಿದ್ಯಾರ್ಥಿಗಳು ಮೂರ್ಛೆ ಹೋಗಿದ್ದಾರೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. ಉತ್ಕರ್ಷ್ ಸೆಂಟರ್‌ನಲ್ಲಿ ತರಗತಿಗಳು ನಡೆಯುತ್ತಿದ್ದವು. ಇಲ್ಲಿ ಗ್ಯಾಸ್ ಸಮಸ್ಯೆ ಇತ್ತು, ಸೋರಿಕೆಯಾದ ಗ್ಯಾಸ್ ಅನ್ನು ವಿದ್ಯಾರ್ಥಿಗಳು ಉಸಿರಾಡಿದ್ದಾರೆ. ಆದ್ದರಿಂದ ಸುಮಾರು 5 ವಿದ್ಯಾರ್ಥಿಗಳು ಮೂರ್ಛೆ ಹೋದರು. ನಾನು ವೈದ್ಯರೊಂದಿಗೆ ಮಾತನಾಡಿದೆ, ಅವರು ಆರೋಗ್ಯ ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ".