ನವದೆಹಲಿ: ಗುಜರಾತ್ ವಿಶ್ವವಿದ್ಯಾಲಯದಲ್ಲಿ ನಮಾಜ್ ವಿಷಯವಾಗಿ ವಿದೇಶಿ ವಿದ್ಯಾರ್ಥಿಗಳ ಮೇಲೆ ಗುಂಪೊಂದು ಹಲ್ಲೆ ದಾಳಿ ಮಾಡಿದೆ. ಈ ಹಿಂಸಾಚಾರ ಪ್ರಕರಣದ ದುಷ್ಕರ್ಮಿಗಳ ವಿರುದ್ಧ ಗುಜರಾತ್ ಸರ್ಕಾರವು ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಅಹಮದಾಬಾದ್‌ನಲ್ಲಿರುವ ಗುಜರಾತ್ ವಿಶ್ವವಿದ್ಯಾಲಯದ ಹಾಸ್ಟೆಲ್‌ಗೆ ಶನಿವಾರ ರಾತ್ರಿ 10.50ರ ಸುಮಾರಿಗೆ 20-25ಕ್ಕೂ ಹೆಚ್ಚು ಜನರ ಗಂಪು ನುಗ್ಗಿತ್ತು. ಇಲ್ಲಿ ವಿದೇಶದಿಂದ ವಿದ್ಯಾಭ್ಯಾಸಕ್ಕೆ ಬಂದ ವಿದ್ಯಾರ್ಥಿಗಳು ನಮಾಜ್ ಮಾಡುವುದನ್ನು ಈ ಗುಂಪು ವಿರೋಧಿಸಿತ್ತು. ಈ ವೇಳೆ, ಗಲಾಟೆ ಉಂಟಾಗಿ, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿತ್ತು. ಅಲ್ಲದೇ, ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದರು. ಕೊಠಡಿಗೆ ಪ್ರವೇಶಿಸಿ ವಸ್ತುಗಳನ್ನು ಧ್ವಂಸಗೊಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ''ಅಹಮದಾಬಾದ್‌ನ ಗುಜರಾತ್ ವಿಶ್ವವಿದ್ಯಾಲಯದಲ್ಲಿ ನಿನ್ನೆ ಹಿಂಸಾಚಾರದ ಘಟನೆ ನಡೆದಿದೆ. ರಾಜ್ಯ ಸರ್ಕಾರವು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಈ ಘರ್ಷಣೆಯಲ್ಲಿ ಇಬ್ಬರು ವಿದೇಶಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರನ್ನು ವೈದ್ಯಕೀಯ ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ'' ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ನಮಾಜ್ ವಿಚಾರವಾಗಿ ಗುಜರಾತ್ ವಿವಿಯಲ್ಲಿ ವಿದೇಶದ ನಾಲ್ವರು ವಿದ್ಯಾರ್ಥಿಗಳ ಮೇಲೆ ಹಲ್ಲೆ
ಇಬ್ಬರು ಆರೋಪಿಗಳ ಬಂಧನ:ಮತ್ತೊಂದೆಡೆ,ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರಕ್ಕೆ ಕಾರಣವಾದ ಇಬ್ಬರು ಆರೋಪಿಗಳನ್ನು ಅಹಮದಾಬಾದ್ ಕ್ರೈಂ ಬ್ರಾಂಚ್ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಆರೋಪಿಗಳನ್ನು ಹಿತೇಶ್ ಮೇವಾಡ ಮತ್ತು ಭರತ್ ಪಟೇಲ್ ಎಂದು ಗುರುತಿಸಲಾಗಿದೆ.
ಹಾಸ್ಟೆಲ್‌ನಲ್ಲಿ ದಾಳಿಗೆ ಒಳಗಾದ ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವ ಶ್ರೀಲಂಕಾ ಮತ್ತು ಮತ್ತೋರ್ವ ಮತ್ತು ತಜಕಿಸ್ತಾನದ ಮೂಲದವರಾಗಿದ್ದಾರೆ. ಇದೇ ವೇಳೆ, ಈ ದಾಳಿಕೋರರಲ್ಲಿ ಕೆಲವರನ್ನು ಈಗಾಗಲೇ ಗುರುತಿಸಲಾಗಿದೆ. ಜೊತೆಗೆ 20-25 ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಘಟನೆಯ ಕುರಿತು ತನಿಖೆಗೆ ಒಂಬತ್ತು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಜಿ.ಎಸ್.ಮಲಿಕ್ ಹೇಳಿದ್ದಾರೆ.
ಈ ಘಟನೆಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ತನಿಖೆಯ ಮೇಲ್ವಿಚಾರಣೆಯನ್ನು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಿಗೆ ವಹಿಸಲಾಗಿದೆ. ಉಳಿದ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು. ಜೊತೆಗೆ ಕಲ್ಲು ತೂರಾಟದ ವಿಡಿಯೋಗಳು ಸಹ ಹೊರಬಿದ್ದಿವೆ. ಇದರಲ್ಲಿ ವ್ಯಕ್ತಿಯೊಬ್ಬ ವಿಶ್ವವಿದ್ಯಾಲಯದ ಸಿಬ್ಬಂದಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತದೆ. ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಪೊಲೀಸರು ಈ ಹಿಂದೆಯೂ ಇಂತಹ ಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಮುಂದೆಯೂ ಕ್ರಮಕೈಗೊಳ್ಳಲಿದ್ದಾರೆ ಎಂದು ಕಮಿಷನರ್ ತಿಳಿಸಿದ್ದಾರೆ.
ಗುಜರಾತ್ ವಿಶ್ವವಿದ್ಯಾಲಯದಲ್ಲಿ ಅಫ್ಘಾನಿಸ್ತಾನ, ತಜಕಿಸ್ತಾನ್, ಶ್ರೀಲಂಕಾ ಮತ್ತು ಆಫ್ರಿಕಾದ ದೇಶಗಳು ಸೇರಿದಂತೆ ಸುಮಾರು 300 ವಿದೇಶಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗಲಾಟೆ ನಡೆದ ವಿಶ್ವವಿದ್ಯಾಲಯದ ಎ-ಬ್ಲಾಕ್ ಹಾಸ್ಟೆಲ್‌ನಲ್ಲಿ ಸುಮಾರು 75 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಉಳಿದುಕೊಂಡಿದ್ದಾರೆ ಎಂದು ವಿವಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮೋಸದಿಂದ ರಷ್ಯಾ ಸೇನೆ ಸೇರಿದ್ದ ಗುಜರಾತ್ ಯುವಕ ಸಾವು: ತವರಿಗೆ ಬಂದ ಮೃತದೇಹ, ಅಂತ್ಯಕ್ರಿಯೆ