ವಿಜಯವಾಡ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಸಂದರ್ಭದಲ್ಲಿ ಸಿಎಂ ಜಗನ್ ಗಾಯಗೊಂಡಿದ್ದಾರೆ. ಕಣ್ಣಿನ ಮೇಲ್ಭಾಗ ಮತ್ತು ಹಣೆಗೆ ಗಾಯವಾಗಿದೆ.
ವಿಜಯವಾಡದದಲ್ಲಿ ಮತದಾರರಿಗೆ ಕೈಮುಗಿಯುತ್ತಿದ್ದಾಗ ದುಷ್ಕರ್ಮಿಗಳು ಬಸ್ ಮೇಲೆ ಕಲ್ಲು ತೂರಿದ್ದು, ಅದು ಸಿಎಂಗೆ ತಗುಲಿದೆ. ತಕ್ಷಣ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡರು. ವೈದ್ಯಕೀಯ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಮುಖ್ಯಮಂತ್ರಿ ಜಗನ್ ಅವರ ಬಸ್ ಯಾತ್ರೆ ಯಥಾಪ್ರಕಾರ ಮುಂದುವರಿಯಿತು. ಸಿಎಂ ಮೇಲೆ ಕಲ್ಲು ತೂರಿದವರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ವಿಜಯವಾಡದ ಸಿಂಗ್ ನಗರದಲ್ಲಿರುವ ವಿವೇಕಾನಂದ ಸ್ಕೂಲ್ ಸೆಂಟರ್ ಬಳಿ ಬಸ್ ಮೇಲೆ ನಿಂತು ಪ್ರಚಾರ ಮಾಡುವಾಗ ಸಿಎಂಗೆ ಕಲ್ಲು ತಗುಲಿದೆ ಎಂದು ಆಂಧ್ರ ಸಿಎಂ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಸಿಎಂ ಮೇಲೆ ಕಲ್ಲು ಎಸೆಯಲು ಕವಣೆ ಬಳಸಿದ್ದರಿಂದ ಪೆಟ್ಟು ತೀವ್ರವಾಗಿದೆ ಎಂದು ತಿಳಿದುಬಂದಿದೆ. ಕಲ್ಲು ತಗುಲಿದ್ದರಿಂದ ಸಿಎಂ ಹಣೆಗೆ ಗಾಯವಾಗಿದ್ದು, ತಕ್ಷಣ ಪಕ್ಕದಲ್ಲೇ ಇದ್ದವರು ಕರವಸ್ತ್ರ ಬಳಸಿ ರಕ್ತ ಒರೆಸಿದರು. ನಂತರ ತಕ್ಷಣವೇ ಬಸ್ಸಿನಲ್ಲಿ ಸಿಎಂಗೆ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದರು. ಕಲ್ಲೇಟಿನ ಗಾಯದ ನೋವಿನಲ್ಲೂ ಪ್ರಥಮ ಚಿಕಿತ್ಸೆ ಬಳಿಕ ಸಿಎಂ ತಮ್ಮ ಪ್ರಚಾರವನ್ನು ಪುನಾರಂಭಿಸಿ, ನಾಲ್ಕು ಗಂಟೆಗಳ ಕಾಲ ಮತಯಾಚನೆ ಮಾಡಿದ್ದಾರೆ. ಇನ್ನು ಈ ದಾಳಿಯ ಬಗ್ಗೆ ವೈಎಸ್ಆರ್ಸಿಪಿ ನಾಯಕರು ಪ್ರತಿಕ್ರಿಯಿಸಿ, ಈ ಘಟನೆಯ ಹಿಂದೆ ಟಿಡಿಪಿ ಕೈವಾಡವಿದೆ ಎಂದು ದೂರಿದ್ದಾರೆ.