ಮುಂಗೇರ್ : ಬಿಹಾರದ ಲಖಿಸರಾಯ್ ಜಿಲ್ಲೆಯ ದುಮ್ರಿ ಹಾಲ್ ಬಳಿಯ ಮತಗಟ್ಟೆಯಲ್ಲಿ ಕಲ್ಲು ತೂರಾಟ ನಡೆದಿದೆ. ನಾಲ್ಕನೇ ಹಂತದ ಲೋಕಸಭೆ ಚುನಾವಣೆ ವೇಳೆ ಮುಂಗೇರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 145, 146ರಲ್ಲಿ ಸಮಾಜ ವಿರೋಧಿಗಳು ಈ ಘಟನೆ ನಡೆಸಿದ್ದಾರೆ. ಬಿಎಲ್‌ಒ ಚೀಟಿ ನೀಡದಿದ್ದಕ್ಕೆ ಸಿಟ್ಟಿಗೆದ್ದ ಜನರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಭದ್ರತಾ ಪಡೆಗಳು ಪರಿಸ್ಥಿತಿಯನ್ನು ಹತೋಟಿಗೆ ತಂದು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಸಮಾಜ ವಿರೋಧಿಗಳು ಕಲ್ಲು ತೂರಾಟ ನಡೆಸಿದ್ದು ಏಕೆ? : ರಾಮದೇವ್ ಸಿಂಗ್ ಕಾಲೇಜಿನಲ್ಲಿರುವ ಮತಗಟ್ಟೆ ಸಂಖ್ಯೆ 151ರಲ್ಲಿದ್ದ ಬಿಎಲ್‌ಒ ಅವರ ಕರ್ತವ್ಯವನ್ನು ಜಮಾಲ್‌ಪುರದ ಕೆಲವು ಮತಗಟ್ಟೆಗೆ ಸ್ಥಳಾಂತರಿಸಲಾಗಿದೆ. ನಂತರ ಚೀಟಿ ವಿತರಣೆ ಕಾರ್ಯಕ್ಕೆ ತೊಂದರೆಯಾಗಿದೆ. ಸ್ಥಳೀಯರು ಮತದಾನ ಕೇಂದ್ರದಿಂದ 400 ಮೀಟರ್ ದೂರದಲ್ಲಿ ಮತದಾರರಿಗೆ ಚೀಟಿ ನೀಡಲು ಪ್ರಾರಂಭಿಸಿದ್ದಾರೆ. ಇದರಿಂದಾಗಿ ಅಲ್ಲಿ ಗುಂಪುಗೂಡಿತು. ಈ ವೇಳೆ ಜನಜಂಗುಳಿಯನ್ನು ಕಂಡು ಬೆಂಗಾವಲು ತಂಡ ಗುಂಪನ್ನು ಚದುರಿಸಲು ಯತ್ನಿಸಿದಾಗ ಕೆಲವರು ಬೆಂಗಾವಲು ತಂಡಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ.
ಬೆಂಗಾವಲು ತಂಡದ ಮೇಲೆ ಸಿಟ್ಟಿಗೆದ್ದ ಜನರು : ಬೆಂಗಾವಲು ತಂಡ ಜನರ ಗುಂಪನ್ನು ಅಲ್ಲಿಂದ ಚದುರಿಸಲು ಬಲಪ್ರಯೋಗ ಮಾಡಿದರು. ಇದರಿಂದ ಆಕ್ರೋಶಗೊಂಡ ಜನರು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದರು. ಮಾಹಿತಿ ಪಡೆದ ಪೊಲೀಸರು ಮತ್ತು ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಕಲ್ಲು ತೂರಾಟದಲ್ಲಿ ಓರ್ವ ಪೊಲೀಸ್ ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ವೇಳೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಈ ವಿಚಾರವಾಗಿ ಲಖಿಸರಾಯ್ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಕುಮಾರ್ ಅವರು ಮಾತನಾಡಿ, "ಕೆಲವು ಬೂತ್‌ಗಳಲ್ಲಿ ಜನರ ನೂಕುನುಗ್ಗಲು ಹೆಚ್ಚಾದ ನಂತರ ಪೊಲೀಸರನ್ನು ಕಳುಹಿಸಲಾಗಿದೆ, ಪ್ರಸ್ತುತ ಪರಿಸ್ಥಿತಿ ಶಾಂತವಾಗಿದೆ" ಎಂದು ತಿಳಿಸಿದರು.