ಪಿಲಿಭಿತ್, ಉತ್ತರಪ್ರದೇಶ: ಮಗಳ ಮದುವೆ ಮುಗಿಸಿ ಉತ್ತರಾಖಂಡಕ್ಕೆ ತೆರಳುತ್ತಿದ್ದ ಕುಟುಂಬವೊಂದು ಗುರುವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಲಿಯಾಗಿದೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಮರ ಮುರಿದು ಕಾರಿನ ಮೇಲೆ ಬಿದ್ದಿದ್ದು, ಕಾರಿನಲ್ಲಿದ್ದ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಉತ್ತರಾಖಂಡದ ಖತಿಮಾ ಜಿಲ್ಲೆಯ ಜಮೂರ್ ಗ್ರಾಮದ ನಿವಾಸಿ ಹುಸ್ನಾ ಬಿ ಹಾಗೂ ಪಿಲಿಭಿತ್ ನಗರದ ಕೊಟ್ವಾಲಿ ಪ್ರದೇಶದ ಚಂದೋಯ್ ಗ್ರಾಮದ ನಿವಾಸಿ ಅನ್ವರ್ ಅಹ್ಮದ್ ಅವರ ವಿವಾಹ ಬುಧವಾರವಷ್ಟೇ ಜರುಗಿತ್ತು. ನಿಕಾಹ್ ನಂತರ ಗುರುವಾರ ವಲೀಮಾ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ತರಾಖಂಡದ ವಧುವಿನ ಕಡೆಯವರು ಪಿಲಿಭಿತ್‌ಗೆ ಆಗಮಿಸಿದ್ದರು. ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಕಾರ್ಯಕ್ರಮ ಮುಗಿಸಿಕೊಂಡು ಎರ್ಟಿಗಾ ಕಾರಿನಲ್ಲಿ ಮನೆಗೆ ವಾಪಸ್ ಆಗುತ್ತಿದ್ದರು.
ನ್ಯೂರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಶೇನ್ ಗುಲ್ ಮ್ಯಾರೇಜ್ ಹಾಲ್ ಬಳಿ ಕಾರು ತಕ್ಷಣವೇ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದೆ. ಹಳ್ಳಕ್ಕೆ ಪಲ್ಟಿಯಾದ ನಂತರ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮರವೊಂದು ಮುರಿದು ಕಾರಿನ ಮೇಲೆ ಬಿದ್ದಿದೆ. ಈ ಘಟನೆಯ ಶಬ್ಧ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಮತ್ತೊಂದು ಕಡೆ ಅಪಘಾತದ ಮಾಹಿತಿ ತಿಳಿದು ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿ ಬಂದು ಪರಿಶೀಲನೆ ನಡೆಸಿದ್ದಾರೆ.