ಮುಂಬೈ (ಮಹಾರಾಷ್ಟ್ರ):ಇತ್ತೀಚೆಗೆ ಮುಗಿದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ 'ಮಹಾಯುತಿ' ಮೈತ್ರಿಕೂಟದ ಮುಂದೆ ಭಾರೀ ಮುಖಭಂಗ ಅನುಭವಿಸಿ ಸೋಲೊಪ್ಪಿಕೊಂಡಿರುವ ಪ್ರತಿಪಕ್ಷಗಳ ಮೈತ್ರಿಕೂಟ 'ಮಹಾವಿಕಾಸ್ ಅಘಾಡಿ'ಗೆ ಮತ್ತೊಂದು ಶಾಕ್ ಎದುರಾಗಿದೆ.
ಎಂವಿಎ ಕೂಟದಲ್ಲಿ ಗುರುತಿಸಿಕೊಂಡಿದ್ದ ಸಮಾಜವಾದಿ ಪಕ್ಷವು ಮೈತ್ರಿಯಿಂದ ಹೊರಬರುವುದಾಗಿ ಹೇಳಿದೆ. ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಕಾರಣ ಎಂದು ಬೊಟ್ಟು ಮಾಡಿದೆ. ಸೋಲಿನ ನಡುವೆ ಎಸ್ಪಿಯ ಈ ನಿರ್ಧಾರ ಕಾಂಗ್ರೆಸ್, ಎನ್ಸಿಪಿ (ಎಸ್ಪಿ), ಶಿವಸೇನೆ(ಯುಬಿಟಿ) ಬಣಕ್ಕೆ ಹಿನ್ನಡೆ ಉಂಟು ಮಾಡಿದೆ.
ಶಿವಸೇನೆ ಮೇಲೆ ಎಸ್ಪಿ ಕಿಡಿ:ಎಂವಿಎ ಕೂಟದಿಂದ ತಾನು ಹೊರಬರಲು ಶಿವಸೇನೆಯತ್ತ ಎಸ್ಪಿ ಬೆರಳು ತೋರಿಸಿದೆ. ಇದಕ್ಕೆ ಕಾರಣ, ಆ ಪಕ್ಷದ ನೇತಾರರು ನೀಡಿದ ಜಾಹೀರಾತು. ಠಾಕ್ರೆ ಬಣದ ಶಿವಸೇನೆಯು ಬಾಬಾರಿ ಮಸೀದಿ ಧ್ವಂಸದ ಬಗ್ಗೆ ಜಾಹೀರಾತು ನೀಡಿದೆ. ಇದನ್ನು ಪಕ್ಷದ ಮುಖಂಡರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಬೆಂಬಲ ನೀಡಿದ್ದಾರೆ.
ಇದನ್ನು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಅಬು ಅಜ್ಮಿ ಅವರು ಟೀಕಿಸಿದ್ದಾರೆ. 'ಬಾಬರಿ ಮಸೀದಿ ಧ್ವಂಸದ ಬಗ್ಗೆ ಶಿವಸೇನೆಯು ಇನ್ನು ತನ್ನ ಹಳೆಯ ನಿರ್ಧಾರಕ್ಕೆ ಬದ್ಧವಾಗಿದೆ. ಮಹಾವಿಕಾಸ್ ಅಘಾಡಿಯು ಇದಕ್ಕೆ ವಿರುದ್ಧವಾಗಿದೆ. ಹಳೆಯ ಘಟನೆಗಳನ್ನು ಮತ್ತೆ ಮುನ್ನೆಲೆಗೆ ತಂದು ಸಮುದಾಯಕ್ಕೆ ನೋವು ತಂದಿದೆ' ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.