ನವದೆಹಲಿ:ಪಂಜಾಬ್‌ನ ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ 1919ರ ಏಪ್ರಿಲ್ 13 ರಂದು ನಡೆದ ಮಾರಣಹೋಮದಲ್ಲಿ ಮಡಿದ ಹುತಾತ್ಮರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಶ್ರದ್ಧಾಂಜಲಿ ಸಲ್ಲಿಸಿದರು. ಈ ಘೋರ ಹತ್ಯಾಕಾಂಡಕ್ಕೆ ಇಂದಿಗೆ 105 ವರ್ಷ. ಹುತಾತ್ಮರ ದೇಶಭಕ್ತಿಯು ಮುಂದಿನ ಪೀಳಿಗೆಗೆ ಸ್ಫೂರ್ತಿ ಎಂದು ಅವರು ಪ್ರತಿಪಾದಿಸಿದ್ದಾರೆ.
ಜಲಿಯನ್‌ವಾಲಾಬಾಗ್‌ನಲ್ಲಿ ಮಾತೃಭೂಮಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ. ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ನೀಡಿದ ಎಲ್ಲಾ ಮಹಾನ್ ಚೇತನಗಳಿಗೆ ದೇಶವಾಸಿಗಳು ಎಂದಿಗೂ ಋಣಿಯಾಗಿರುತ್ತಾರೆ. ಅವರ ದೇಶಪ್ರೇಮವು ಮುಂದಿನ ಎಲ್ಲ ಪೀಳಿಗೆಗೆ ಸ್ಪೂರ್ತಿಯಾಗಿರಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
"ದೇಶದ ನನ್ನ ಕುಟುಂಬದ ಸದಸ್ಯರ ಪರವಾಗಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಎಲ್ಲ ವೀರ ಹುತಾತ್ಮರಿಗೆ ನನ್ನ ಮನದಾಳದ ಗೌರವವನ್ನು ಸಲ್ಲಿಸುತ್ತೇನೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸ್ವಾತಂತ್ರ್ಯದ ಕಿಚ್ಚಿಗೆ 'ರಕ್ತ' ಸುರಿದ ಮೈಕೆಲ್ ಡಯರ್:ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಡಾ.ಸತ್ಯಪಾಲ್ ಮತ್ತು ಡಾ.ಸೈಫುದ್ದೀನ್ ಅವರ ಬಂಧನವನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟಿಸಲು ಪಂಜಾಬ್‌ನ ಅಮೃತಸರದಲ್ಲಿ ಆರರಿಂದ ಏಳು ಎಕರೆಗಳಷ್ಟು ವಿಸ್ತಾರವಾದ ಉದ್ಯಾನವನ ಜಲಿಯನ್‌ವಾಲಾ ಬಾಗ್‌ನಲ್ಲಿ ಸುಮಾರು 20,000 ಜನರು ಜಮಾಯಿಸಿದ್ದರು. ಸೇನಾಧಿಕಾರಿ ಜನರಲ್ ಆರ್ ಡಯರ್ ಈ ಪ್ರತಿಭಟನೆಯನ್ನು ಹತ್ತಿಕ್ಕಲು ಕರೆ ನೀಡಿದ್ದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಒಂದು ದಿನದ ಮೊದಲು ಅಮೃತಸರದಲ್ಲಿ ಕರ್ಫ್ಯೂ ಘೋಷಿಸಲಾಗಿತ್ತು.