ಇಂಜಿನಿಯರ್ ಕೆಲಸಕ್ಕೆ ಗುಡ್ ಬೈ ಹೇಳಿ ಹಸು ಸಾಕಣೆ: ಈಗ 6-8 ಕೋಟಿ ಮೊತ್ತದ ಕಂಪನಿಗೆ ಒಡೆಯ - ENGINEER LEFT JOB STARTED DAIRY
ಗಾಜಿಯಾಬಾದ್ ನಿವಾಸಿ ಅಸೀಂ ರಾವತ್ ಎಂಬವರು ಭಾರಿ ಸಂಬಳದ ಇಂಜಿನಿಯರ್ ಕೆಲಸ ಬಿಟ್ಟು ಹಸು ಸಾಕಣೆ ಆರಂಭಿಸಿ, ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಕಂಪನಿ ಸ್ಥಾಪಿಸಿ ಸೈ ಎನಿಸಿಕೊಂಡಿದ್ದಾರೆ.
ಇಂಜಿನಿಯರ್ ಕೆಲಸಕ್ಕೆ ಗುಡ್ ಬೈ ಹೇಳಿ ಹಸು ಸಾಕಣೆ: ಈಗ 6-8ಕೋಟಿಯ ಕಂಪನಿಯ ಒಡೆಯ (ETV Bharat)
ನವದೆಹಲಿ: ಒಂದು ಕಾಲದಲ್ಲಿ ಯುರೋಪ್ ಮತ್ತು ಅಮೆರಿಕದಲ್ಲಿ ಅದ್ಭುತ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದ ಅಸೀಮ್ ರಾವತ್, ಕೈತುಂಬ ಬರುವ ಸಂಬಳ ಬಿಟ್ಟು ಸ್ವಂತದ್ದೇನಾದರೂ ಮಾಡಬೇಕು ಎಂಬ ಛಲಕ್ಕೆ ಬಿದ್ದರು. ಈ ಸಂಬಂಧ ಅವರು ಒಂದು ಹೆಜ್ಜೆ ಮುಂದಿಟ್ಟ ಈಗ ಸಕ್ಸಸ್ ಕೂಡಾ ಆಗಿದ್ದಾರೆ.
ಯಾರಿವರು ಅಸೀಮ್ ರಾವತ್:ದೆಹಲಿಗೆ ಹೊಂದಿಕೊಂಡಿರುವ ಗಾಜಿಯಾಬಾದ್‌ನ ಸಿಕಂದರ್‌ಪುರ ಗ್ರಾಮದ ನಿವಾಸಿಯೇ ಈ ಅಸೀಮ್ ರಾವತ್. ಕೆಲಸ ಬಿಟ್ಟು ತಮ್ಮ ಗ್ರಾಮದಲ್ಲಿ "ಹೇತಾ" ಎಂಬ ಹೆಸರಿನಲ್ಲಿ ಹಸು ಸಾಕಣೆ ಕೇಂದ್ರ ಆರಂಭಿಸಿ, ಕೆಲವೇ ವರ್ಷಗಳಲ್ಲಿ 6 ರಿಂದ 8 ಕೋಟಿ ರೂ.ಗಳ ವಹಿವಾಟು ನಡೆಸುವ ಕಂಪನಿ ಸ್ಥಾಪಿಸಿದರು. ಅವರ ಗೋಶಾಲೆಯಲ್ಲಿ ಕೇವಲ ಭಾರತೀಯ ತಳಿಯ ಹಸುಗಳನ್ನು ಮಾತ್ರ ಸಾಕಲಾಗುತ್ತದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಅಸೀಮ್ ರಾವತ್ ಅವರ ಡೈರಿ ಉತ್ಪನ್ನಗಳ ಬೆಲೆ ಸಾಮಾನ್ಯ ಡೈರಿ ಉತ್ಪನ್ನಗಳಿಗಿಂತ ಹೆಚ್ಚು ದುಬಾರಿ (ETV Bharat)
ಹೈನುಗಾರಿಕೆ ಜತೆಗೆ ಉಪ ಉತ್ಪನ್ನಗಳ ತಯಾರಿಕೆ:ಅಸೀಮ್ ರಾವತ್ ಕೇವಲ ಹೈನುಗಾರಿಕೆಗೆ ಸೀಮಿತವಾಗದೇ ಸಾವಯವ ಕೃಷಿ, ಪಂಚಗವ್ಯ ಔಷಧಗಳು ಮತ್ತು 131 ಬಗೆಯ ನೈಸರ್ಗಿಕ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಜನರು ಈ ಉತ್ಪನ್ನಗಳನ್ನು ಮುಗಿ ಬಿದ್ದು ಖರೀದಿಸುತ್ತಿದ್ದಾರೆ. ಅವರ ಈ ಉಪಕ್ರಮದಿಂದ 110 ಮಂದಿಗೆ ನೇರ ಉದ್ಯೋಗವೂ ದೊರಕಿದೆ. ಅವರ ಶ್ರಮಕ್ಕೆ 2018 ರಲ್ಲಿ 'ಗೋಪಾಲ ರತ್ನ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ.
"ಹೇತಾ" ಎಂಬ ಹೆಸರಿನಲ್ಲಿ ಹಸು ಸಾಕಣೆ ಕೇಂದ್ರ ಆರಂಭಿಸಿ, ಕೆಲವೇ ವರ್ಷಗಳಲ್ಲಿ 6 ರಿಂದ 8 ಕೋಟಿ ರೂ.ಗಳ ವಹಿವಾಟು ನಡೆಸುವ ಕಂಪನಿ (ETV Bharat)
ಅಸೀಮ್ ಹೈನುಗಾರಿಕೆಗೆ ಪ್ರೇರಣೆ ಆಗಿದ್ದು ಏನು?;ಅಸೀಮ್ ಅವರೇನೂ ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಅವರದ್ದು ಮಧ್ಯಮ ವರ್ಗದ ಕುಟುಂಬ. ಸಾಫ್ಟ್ ವೇರ್ ಇಂಜಿನಿಯರಿಂಗ್ ಮಾಡಿದ ಇವರು, ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಂಡು 14ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದರು. ಒಳ್ಳೆ ಕೆಲಸ, ಕೈ ತುಂಬ ಹಣ ಎಲ್ಲವೂ ಇತ್ತು. ಆದರೂ ಮನಸಿಗೆ ಅದೇನೋ ಕಸಿವಿಸಿ. ಹಣವೇ ಸರ್ವಸ್ವವಲ್ಲ, ಜೀವನದ ಗುರಿ ಇದಷ್ಟೇ ಅಲ್ಲ ಎಂದು ಭಾವಿಸಿದ ಅಸೀಮ್ ಅವರು ಒಂದು ದಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು. ಅಲ್ಲಿ ದೇಶಿ ಹಸುಗಳಿಂದ ಹೈನುಗಾರಿಕೆ ಸಾಧ್ಯವಿಲ್ಲ ಎಂಬ ಮಾತನ್ನು ಕೇಳಿದರು.
ಯಾರಿವರು ಅಸೀಮ್ ರಾವತ್ (ETV Bharat)
ಈ ವಿಷಯ ಅವರ ಮನಸಿಗೆ ಭಾರಿ ನೋವು ತಂದಿತು. ಏಕೆಂದರೆ ಬಾಲ್ಯದಿಂದಲೂ ನಾವು ಗೋವುಗಳನ್ನು, ಲಕ್ಷ್ಮಿ, ಸಮೃದ್ಧಿಯ ಮೂಲ ಎಂದು ಕೇಳುತ್ತಿದ್ದೆವು. ಇಂತಹ ಪರಿಸ್ಥಿತಿಯಲ್ಲಿ ದೇಶಿ ಗೋವುಗಳಿಂದ ಹೈನುಗಾರಿಕೆ ಸಾಧ್ಯವಿಲ್ಲ ಎಂಬ ಮಾತು ಅವರನ್ನು ಚಿಂತನೆಗೆ ಹಚ್ಚುವಂತೆ ಮಾಡಿತು. ಅಂದು ಆ ಬಗ್ಗೆ ಯೋಚನೆ ಶುರು ಮಾಡಿದ ಅವರು ದೇಶಿ ಹಸುಗಳನ್ನು ಸಂರಕ್ಷಿಸುವ ಮಾದರಿಯನ್ನು ರೂಪಿಸುವ ಬಗ್ಗೆ ಕಾರ್ಯರೂಪಕ್ಕಿಳಿಸುವ ನಿರ್ಧಾರ ಮಾಡಿದರು. ದೇಶಿ ಹಸುಗಳಿಂದ ಹೈನುಗಾರಿಕೆಯನ್ನು ಸಂಪೂರ್ಣ ಸ್ವಾವಲಂಬಿಯಾಗಿ ಮತ್ತು ಲಾಭದಾಯಕವಾಗಿ ನಡೆಸಬಹುದೆಂದು ಅವರು ಯೋಚಿಸಿದರು. ಈ ಆಲೋಚನೆಯಿಂದಲೇ ಅವರ ಪಯಣ ಆರಂಭವಾಯಿತು.
ದೆಹಲಿಗೆ ಹೊಂದಿಕೊಂಡಿರುವ ಗಾಜಿಯಾಬಾದ್‌ನ ಸಿಕಂದರ್‌ಪುರ ಗ್ರಾಮದ ನಿವಾಸಿ ಈ ಅಸೀಮ್ ರಾವತ್ (ETV Bharat)
ಸವಾಲಿನ ನಡುವೆ, ಎರಡು ಹಸುಗಳಿಂದ ಕೆಲಸ ಆರಂಭ: ತಮ್ಮ ಆಲೋಚನೆಯನ್ನು ಕಾರ್ಯಗತಗೊಳಿಸಲು ತೀರ್ಮಾನಿಸಿದ ಅಸೀಮ್ ಅವರು, ಪೋಷಕರಿಗೆ ಈ ವಿಷಯ ತಿಳಿಸಿದರು. ಆಗ ಇಡೀ ಕುಟುಂಬ ಆತಂಕಕ್ಕೊಳಗಾಗಿತ್ತಂತೆ. ಅಂತಿಮವಾಗಿ ಮನೆಯವರನ್ನು ಒಪ್ಪಿಸಿ, ಕೈ ತುಂಬಾ ಸಂಬಳ ಬರುವ ವೃತ್ತಿಯನ್ನು ತೊರೆದು ಹಳ್ಳಿಯಲ್ಲಿ ಗೋಶಾಲೆ ತೆರೆಯಲು ಮುಂದಾದರು. ಕೇವಲ ಎರಡು ಹಸುಗಳೊಂದಿಗೆ ಹೈನುಗಾರಿಕೆ ಪ್ರಾರಂಭಿಸಿದರು. ಆರಂಭದಲ್ಲಿ ಸಮಾಜದಿಂದ ಟೀಕೆ, ಆರ್ಥಿಕ ಸಂಕಷ್ಟಗಳು, ಗೋಶಾಲೆ ನಡೆಸುವ ಸೂಕ್ಷ್ಮತೆಗಳು ಸೇರಿದಂತೆ ಹಲವು ತೊಂದರೆಗಳನ್ನು ಎದುರಿಸಬೇಕಾಯಿತು ಅಂತಾರೆ ಅಸೀಮ್. ಆದರೆ, ಕ್ರಮೇಣ ಜನರು ಇವರ ಹತ್ತಿರ ಬರಲು ಆರಂಭಿಸಿದರು. ಗೋಶಾಲೆಯಲ್ಲಿ ಈಗ ಸಾವಿರಕ್ಕೂ ಹೆಚ್ಚು ಹಸುಗಳಿವೆ. ಹಸುಗಳಿಂದ ಸಿಗುವ ಪದಾರ್ಥಗಳಿಂದ 131 ಬಗೆಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಇದರಲ್ಲಿ ಹಾಲು, ಮೊಸರು, ತುಪ್ಪ, ಮೂತ್ರ ಮತ್ತು ಸಾವಯವ ಗೊಬ್ಬರಗಳ ತಯಾರಿಕೆ ಕೂಡಾ ಸೇರಿದೆ.
ಇಂಜಿನಿಯರ್ ಕೆಲಸ ಬಿಟ್ಟು ಹಸು ಸಾಕಣೆ ಆರಂಭಿಸಿ, ಕೋಟ್ಯಂತರ ರೂಪಾಯಿ ವಹಿವಾಟು (ETV Bharat)
ಭಾರತೀಯ ತಳಿ ಹಸುಗಳ ಮೇಲೇಯೇ ಇವರ ಗಮನ: ಅಸೀಮ್ ರಾವತ್ ತಮ್ಮ ಗೋಶಾಲೆಯಲ್ಲಿ ಕೇವಲ ಭಾರತೀಯ ತಳಿಯ ಹಸುಗಳನ್ನು ಮಾತ್ರವೇ ಸಾಕುತ್ತಾರೆ. ಈ ಹಸುಗಳಲ್ಲಿ ಗಿರ್, ಸಾಹಿವಾಲ್, ಥಾರ್ಪಾರ್ಕರ್ ಮತ್ತು ಹಿಮಾಲಯ ಬದ್ರಿ ಸೇರಿವೆ. ವಿದೇಶಿ ತಳಿಯ ಹಸುಗಳಲ್ಲಿ ಜರ್ಸಿ ಮತ್ತು ಬ್ರೌನ್ ಸ್ವಿಸ್ ಹಸುಗಳು ಭಾರತದ ಹವಾಮಾನಕ್ಕೆ ಹೊಂದಿಕೆಯಾಗುವುದಿಲ್ಲ ಎಂಬುದು ಅವರ ನಂಬಿಕೆ. ಅಸೀಮ್ ಅವರು ಸಾಕುವ ಹಸುವಿನ ಹಾಲಿನಲ್ಲಿ A1 ಪ್ರೋಟೀನ್ ಕಂಡುಬರುತ್ತದೆ. ಸ್ವಲ್ಪ ಪ್ರಮಾಣದ A2 ಮಾದರಿಯ ಪ್ರೋಟೀನ್ ಕೂಡ ಇದೆ. A1 ಪ್ರೋಟೀನ್ ಅನೇಕ ರೋಗಗಳಿಗೆ ಕಾರಣವಾಗಬಹುದು. ಆದರೆ, A2 ಮಾದರಿಯ ಪ್ರೋಟೀನ್ ಭಾರತೀಯ ತಳಿಯ ಹಸುಗಳ ಹಾಲಿನಲ್ಲಿ ಕಂಡು ಬರುತ್ತದೆ, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದ್ದು ಅಂತಾರೆ ಅವರು. ನ್ಯೂಜಿಲೆಂಡ್ ನ ವಿಜ್ಞಾನಿಯೊಬ್ಬರು ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ.
ಅಸೀಮ್ ರಾವತ್ ಅವರ ಡೈರಿ ಉತ್ಪನ್ನಗಳ ಬೆಲೆ ಸಾಮಾನ್ಯ ಡೈರಿ ಉತ್ಪನ್ನಗಳಿಗಿಂತ ಹೆಚ್ಚು ದುಬಾರಿ (ETV Bharat)
ನೈತಿಕ ಹಾಲುಕರೆಯುವಿಕೆ ಮತ್ತು ಸಾವಯವ ಕೃಷಿ: ಅಸೀಮ್ ರಾವತ್ ಅವರ ಹೇತಾ ಗೋಶಾಲೆಯಲ್ಲಿ ನೈತಿಕ ಹಾಲುಕರೆಯುವಿಕೆ ನೀತಿ ಅನುಸರಿಸಲಾಗುತ್ತಿದೆ. ಅಂದರೆ ಹಸುವಿನ ಹಾಲನ್ನು ಅರ್ಧದಷ್ಟು ಕರುವಿಗೆ ಬಿಟ್ಟು ಕೇವಲ ಎರಡು ಮೊಲೆಗಳಿಂದ ಮಾತ್ರವೇ ಹಾಲು ಕರೆಯಲಾಗುತ್ತದೆ. ಇದರಿಂದ ಕರುಗಳು ದಷ್ಟಪುಷ್ಟವಾಗಿ ಬೆಳೆಯಲು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ. ಇದಲ್ಲದೇ ಸಾವಯವ ಕೃಷಿಯನ್ನೂ ಇವರ ಸಂಸ್ಥೆವತಿಯಿಂದ ಮಾಡಲಾಗುತ್ತಿದೆ. ಹಸುವಿನ ಸಗಣಿ ಮತ್ತು ಮೂತ್ರವನ್ನು ಸಾವಯವ ಗೊಬ್ಬರ ಮತ್ತು ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಇದು ರೈತರಿಗೂ ಪ್ರಯೋಜನವನ್ನುಂಟು ಮಾಡುತ್ತದೆ.
ಇಂಜಿನಿಯರ್ ಕೆಲಸಕ್ಕೆ ಗುಡ್ ಬೈ ಹೇಳಿ ಹಸು ಸಾಕಣೆ: ಈಗ 6-8ಕೋಟಿಯ ಕಂಪನಿಯ ಒಡೆಯ (ETV Bharat)
180 ರೂಗೆ 1ಲೀಟರ್ ಹಾಲ ಮಾರಾಟ:ಅಸೀಮ್ ರಾವತ್ ಅವರ ಡೈರಿ ಉತ್ಪನ್ನಗಳ ಬೆಲೆ ಸಾಮಾನ್ಯ ಡೈರಿ ಉತ್ಪನ್ನಗಳಿಗಿಂತ ಹೆಚ್ಚು ದುಬಾರಿಯಾಗಿದೆ. ಅವರ ಡೈರಿಯಲ್ಲಿ ಹಾಲು ಲೀಟರ್‌ಗೆ 180 ರೂ.ಗೆ ಮತ್ತು ತುಪ್ಪವನ್ನು ಲೀಟರ್‌ಗೆ 4000 ರೂ.ಗೆ ಮಾರಾಟ ಮಾಡಲಾಗುತ್ತದೆ. ಹಸುಗಳಿಗೆ ನಾವು ಗುಣಮಟ್ಟದ ಆಹಾರವನ್ನು ತಿನ್ನಿಸುತ್ತೇವೆ ಹಾಗೂ ಗುಣಮಟ್ಟದ ಉತ್ಪನ್ನವನ್ನು ಪಡೆಯುತ್ತೇವೆ. ಇದಕ್ಕಾಗಿ ನಾವು ಕ್ಯಾರೆಟ್, ಬೀಟ್ರೂಟ್, ಜೋಳ, ರಾಗಿ ಮತ್ತು ಮೆಂತ್ಯ ಇತ್ಯಾದಿ ಆಹಾರಗಳನ್ನು ಗೋವುಗಳಿಗೆ ಒದಗಿಸುತ್ತೇವೆ ಅಂತಾರೆ ಅಸೀಮ್.
ಅಷ್ಟೇ ಅಲ್ಲ ಹಸುಗಳಿಗೆ ಹೈಡ್ರೋಪೋನಿಕ್ ತಂತ್ರಜ್ಞಾನದ ಮೂಲಕ ಬೆಳೆದ ಮೊಳಕೆಯೊಡೆದ ಮೇವು ಹಾಗೂ ಅರ್ಜಿನೈನ್ ವಸ್ತುಗಳನ್ನು ನೀಡಲಾಗುತ್ತದೆ. ರಾಸಾಯನಿಕಗಳನ್ನು ಒಳಗೊಂಡಿರುವ ಯಾವುದೇ ಆಹಾರವನ್ನು ನೀಡುವುದಿಲ್ಲ. ಈ ಕಾರಣದಿಂದಾಗಿ, ತಮ್ಮ ಡೈರಿಯಲ್ಲಿರುವ ಹಾಲು ಉತ್ತಮ ಗುಣಮಟ್ಟದ್ದಾಗಿದೆ ಮತ್ತು ಗ್ರಾಹಕರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ಈ ಎಲ್ಲ ಕಾರಣಗಳಿಂದಾಗಿಯೇ ಅವರು ಲೀಟರ್ ಗೆ 180 ರೂ. ಕೊಟ್ಟು ಖರೀದಿಸುತ್ತಾರೆ ಎಂದು ಅಸೀಮ್ ರಾವತ್ ಹೇಳುತ್ತಿದ್ದಾರೆ.
ಗೋಪಾಲ ರತ್ನ ಪುರಸ್ಕಾರ: ಅಸೀಮ್ ರಾವತ್ ಅವರ ಕಠಿಣ ಪರಿಶ್ರಮ ಮತ್ತು ಗೋವುಗಳ ಬಗ್ಗೆ ಅವರ ಸಮರ್ಪಣೆಯನ್ನು ಗುರುತಿಸಿರುವ ಸರ್ಕಾರ ಅವರ ಕೆಲಸವನ್ನು ಶ್ಲಾಘಿಸಿದೆ. ಅಸೀಮ್ ರಾವತ್ ಅವರಿಗೆ 2018 ರಲ್ಲಿ ಭಾರತ ಸರ್ಕಾರವು 'ಗೋಪಾಲ್ ರತ್ನ ಪ್ರಶಸ್ತಿ' ನೀಡಿ ಗೌರವಿಸಿದೆ. ಇದು ಡೈರಿ ಕ್ಷೇತ್ರದ ಅತಿದೊಡ್ಡ ಪ್ರಶಸ್ತಿಯಾಗಿದೆ. ಇದಲ್ಲದೇ ಅಸೀಮ್ ರಾವತ್ ಅವರ ಸಂಸ್ಥೆಯು ಹತ್ತಾರು ಪ್ರಶಸ್ತಿಗಳಿಗೆ ಭಾಜನವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಭೇಟಿ:ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು, ಅಸೀಂ ರಾವತ್‌ಗೆ ಹೆಮ್ಮೆಯ ಕ್ಷಣ. ಗೋಪಾಲ ರತ್ನ ಪ್ರಶಸ್ತಿ ಪಡೆದ ಕೆಲವು ದಿನಗಳ ನಂತರ ಮಥುರಾಗೆ ಕಾರ್ಯಕ್ರಮವೊಂದಕ್ಕೆ ಅವರನ್ನು ಕರೆಸಲಾಗಿತ್ತು . ಈ ವೇಳೆ ಅವರು ಸಾಹಿವಾಲ್ ಹಸುವನ್ನು ಜನರಿಗೆ ತೋರಿಸಲು ಕೊಂಡೊಯ್ದಿದ್ದರು, ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹಸುವನ್ನು ನೋಡಿ ಅದರೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು.ಇಂದೂ ಕೂಡ ಪಶುವೈದ್ಯಕೀಯ ಮೊಬೈಲ್ ವ್ಯಾನ್‌ನಲ್ಲಿ ಪ್ರದರ್ಶಿಸಲಾದ ಪ್ರಧಾನಿಯವರ ಫೋಟೋದಲ್ಲಿ ಅಸೀಮ್ ರಾವತ್ ಅವರ ಹೇತಾ ಗೋಶಾಲೆ ಮತ್ತು ಅವರ ಸಾಹಿವಾಲ್ ಹಸು ಇದೆ ಎಂದು ಅಸೀಮ್ ರಾವತ್ ಹೇಳುತ್ತಾರೆ.