ಗ್ಯಾಂಗ್ಟಕ್(ಸಿಕ್ಕಿಂ): ಸಿಕ್ಕಿಂ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಸಿಕೆಎಂ) ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿದೆ. 32 ವಿಧಾನಸಭೆ ಕ್ಷೇತ್ರಗಳ ಪೈಕಿ ಸಿಕೆಎಂ 31 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಭಾರೀ ಬಹುಮತ ಪಡೆದಿದೆ. ಪ್ರತಿಪಕ್ಷ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್ಡಿಎಫ್) ಕೇವಲ 1 ಸ್ಥಾನಕ್ಕೆ ಸೀಮಿತವಾಗಿದೆ.
2024ರ ಲೋಕಸಭೆ ಚುನಾವಣೆಗೆ ಏಪ್ರಿಲ್ 19ರಂದು ನಡೆದ ಮೊದಲ ಹಂತದ ಮತದಾನದ ದಿನವೇ ಸಿಕ್ಕಿಂನ 32 ವಿಧಾನಸಭೆ ಕ್ಷೇತ್ರಗಳಿಗೂ ಮತದಾನವಾಗಿತ್ತು. ಇಂದು ಮತ ಎಣಿಕೆ ನಡೆದಿದೆ. 2019ರ ವಿಧಾನಸಭೆ ಚುನಾವಣೆಯಲ್ಲಿ 17 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿದ್ದ ಸಿಕೆಎಂಗೆ ಈ ಬಾರಿ ದೊಡ್ಡ ಗೆಲುವು ಸಿಕ್ಕಿದೆ.
ರಾಜ್ಯದಲ್ಲಿ 25 ವರ್ಷಗಳ ಕಾಲ ಅಧಿಕಾರ ನಡೆಸಿದ್ದ ಎಸ್ಡಿಎಫ್ ಹೀನಾಯ ಪರಿಸ್ಥಿತಿಗೆ ತಲುಪಿದೆ. ಶ್ಯಾರಿ ಕ್ಷೇತ್ರದಲ್ಲಿ ಮಾತ್ರ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ. ಉಳಿದಂತೆ, ಪಕ್ಷದ ಅಧ್ಯಕ್ಷ, ಮಾಜಿ ಸಿಎಂ ಪವನ್ ಚಾಮ್ಲಿಂಗ್ ತಾವು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲೂ ಸೋಲು ಅನುಭವಿಸಿದ್ದಾರೆ. ಮತ್ತೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷ, ಹಾಲಿ ಶಾಸಕ ದಿಲ್ಲಿ ರಾಮ್ ಥಾಪಾ ಸಹ ಸಿಕೆಎಂ ಅಭ್ಯರ್ಥಿಯೆದುರು ಸೋಲು ಕಂಡಿದ್ದಾರೆ.