ಕೃಷ್ಣ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಕೃತಿವೆನ್ನು ಮಂಡಲದ ಸೀತನಪಲ್ಲಿಯಲ್ಲಿ ಶುಕ್ರವಾರ ಬೆಳ್ಳಂ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನರು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೃತಿವೆನ್ನುವ ಕಡೆಗೆ ಮೀನುಗಾರರನ್ನು ಹೊತ್ತೊಯ್ಯುತ್ತಿದ್ದ ಮಿನಿ ಟ್ರಕ್ ಎದುರುಗಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವಘಡದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಒಬ್ಬರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿರುವುದಾಗಿ ಅವರು ತಿಳಿಸಿದ್ದಾರೆ. ಭೂಷಣಂ (26), ವೆಂಕಟ ಸತ್ಯನಾರಾಯಣ (32), ನಾಗರಾಜು, ಕನಕರಾಜು ಮತ್ತು ಧರ್ಮ ಮೃತರು. ಮೃತರಲ್ಲಿ ಐವರು ಪಶ್ಚಿಮ ಗೋದಾವರಿ ಜಿಲ್ಲೆಯ ತಲ್ಲರೇವು ನಿವಾಸಿಗಳು ಎಂದು ಗುರುತಿಸಲಾಗಿದೆ.
ಮಿನಿ ಟ್ರಕ್ನಲ್ಲಿ ಚಾಲಕನ ಜತೆಗೆ 10 ಮಂದಿ ಪ್ರಯಾಣಿಕರಿದ್ದರು. ಕಂಟೈನರ್ ಲಾರಿಯಲ್ಲಿ ಚಾಲಕನ ಜೊತೆಗೆ ಓರ್ವ ಪ್ರಯಾಣಿಕ ಇದ್ದನು. ಕಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಅನ್ನು ಓವರ್ ಟೇಕ್ ಮಾಡುವಾಗ ಮಿನಿ ಟ್ರಕ್ ಎದುರುಗಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಸಭಸಕ್ಕೆ ಸ್ಥಳದಲ್ಲೇ ಐವರು ಮೃತಪಟ್ಟು, ಓರ್ವ ಆಸ್ಪತ್ರೆಗೆ ಸಾಗಿಸುವ ವೇಳೆ ಅಸುನೀಗಿದ್ದಾನೆ. ಐವರ ಸ್ಥಿತಿ ಚಿಂತಾಜನಕವಾಗಿದೆ. ಬೆಳಗ್ಗೆ ಸಂಭವಿಸಿದ ಈ ಅಪಘಾತದಿಂದ ಎರಡ್ಮೂರು ಕಿಲೋಮೀಟರ್ ವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು ಎಂದು ಮಚಲಿಪಟ್ಟಣಂ ಡಿಎಸ್ಪಿ ಸುಭಾನಿ ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ಮಚಲಿಪಟ್ಟಣ ಆಸ್ಪತ್ರೆಗೆ ರವಾನಿಸಲಾಗಿದೆ.
ಕೊಳ್ಳು ರವೀಂದ್ರ ತೀವ್ರ ಆಘಾತ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿರುವ ಘಟನೆಗೆ ಸಚಿವ ಕೊಲ್ಲು ರವೀಂದ್ರ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದ ಅವರು, ಗಂಭೀರವಾಗಿ ಗಾಯಗೊಂಡು ಮಚಲಿಪಟ್ಟಣದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವಂತೆ ಆಸ್ಪತ್ರೆಯ ಅಧೀಕ್ಷಕರಿಗೆ ಸೂಚನೆ ನೀಡಿದ್ದಾರೆ. ಒಂಬತ್ತು ಮಂದಿ ಮೀನುಗಾರರ ಪೈಕಿ ಐವರು ಸಾವನ್ನಪ್ಪಿರುವುದು ಬೇಸರದ ಸಂಗತಿ. ಮೃತರಿಗೆ ಸರ್ಕಾರದ ನೆರವು ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಕೊಳ್ಳು ರವೀಂದ್ರ ಭರವಸೆ ನೀಡಿದರು.
ಇದನ್ನೂ ಓದಿ:ಕುವೈತ್ ಅಗ್ನಿ ಅವಘಡ: 45 ಭಾರತೀಯರ ಪಾರ್ಥಿವ ಶರೀರಗಳನ್ನು ಕೊಚ್ಚಿಗೆ ತರುತ್ತಿರುವ IAF ವಿಮಾನ - Kuwait fire tragedy