ಕರ್ನಾಟಕ

karnataka

ETV Bharat / bharat

ಸುಪ್ರೀಂಕೋರ್ಟ್ ಮೊರೆ ಹೋದ ಅನರ್ಹಗೊಂಡ ಹಿಮಾಚಲ ಪ್ರದೇಶದ ಆರು ಶಾಸಕರು - Congress

ಶಾಸಕ ಸ್ಥಾನದಿಂದ ಅನರ್ಹಗೊಂಡ ಹಿಮಾಚಲ ಪ್ರದೇಶದ ಕಾಂಗ್ರೆಸ್​ ಪಕ್ಷದ ಆರು ಶಾಸಕರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದಾರೆ

Supreme Court
ಸುಪ್ರೀಂ ಕೋರ್ಟ್

By PTI

Published : Mar 5, 2024, 5:20 PM IST

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಕಾರಣಕ್ಕೆ ಶಾಸಕತ್ವದಿಂದ ಅನರ್ಹಗೊಂಡ ಕಾಂಗ್ರೆಸ್​ ಪಕ್ಷದ ಆರು ಜನ ಶಾಸಕರು ಸುಪ್ರೀಂ ಕೋರ್ಟ್​ ಮೊರೆಹೋಗಿದ್ದಾರೆ. ಶಾಸಕ ಸ್ಥಾನದಿಂದ ತಮ್ಮನ್ನು ಅನರ್ಹಗೊಳಿಸಿದ ವಿಧಾನಸಭೆ ಸ್ಪೀಕರ್​ ಕುಲ್​​ದೀಪ್​ ಸಿಂಗ್​ ಪಥನಿಯಾ ಅವರ ನಿರ್ಧಾರದ ವಿರುದ್ಧ ಶಾಸಕರು ಅರ್ಜಿ ಸಲ್ಲಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಫೆಬ್ರವರಿ 27ರಂದು ಏಕೈಕ ರಾಜ್ಯಸಭೆ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆಡಳಿತಾರೂಢ ಕಾಂಗ್ರೆಸ್​ ಪಕ್ಷವು ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಈ ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿತ್ತು. ಹೀಗಾಗಿ ಪಕ್ಷದಿಂದ ಖ್ಯಾತ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರನ್ನು ಚುನಾವಣಾ ಕಣಕ್ಕೆ ಇಳಿಸಿತ್ತು. ಮತ್ತೊಂದೆಡೆ, ಬಿಜೆಪಿ ತನ್ನ ಸಂಖ್ಯಾಬಲ ಕಡಿಮೆ ಇದ್ದರೂ ಅಭ್ಯರ್ಥಿ ಹಾಕಿತ್ತು. ಇದರಿಂದ ಚುನಾವಣಾ ನಡೆದಿತ್ತು.

ಇದನ್ನೂ ಓದಿ:ಅಡ್ಡ ಮತದಾನ; ಹಿಮಾಚಲ ಪ್ರದೇಶ ಕಾಂಗ್ರೆಸ್​ನ 6 ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್​

ಈ ವೇಳೆ, ಕಾಂಗ್ರೆಸ್​​​ನ​ ಆರು ಶಾಸಕರು ಬಿಜೆಪಿ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದ್ದರು. ಇದರ ಪರಿಣಾಮ ಬಿಜೆಪಿ ಅಭ್ಯರ್ಥಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಪಕ್ಷದ ವಿಪ್​ ಉಲ್ಲಂಘಿಸಿ ಎದುರಾಳಿ ಅಭ್ಯರ್ಥಿಗೆ ಮತ ಹಾಕಿದ್ದಲ್ಲದೇ, ಈ ಬಂಡಾಯ ಶಾಸಕರು ನಂತರದಲ್ಲಿ ಬಜೆಟ್‌ ಮೇಲಿನ ಮತದಾನದಿಂದಲೂ ದೂರ ಉಳಿದಿದ್ದರು. ಆದ್ದರಿಂದ ವಿಪ್​ ಉಲ್ಲಂಘನೆ ಆಧಾರದ ಮೇಲೆ ಈ ಶಾಸಕರನ್ನು ಶಾಸಕತ್ವದಿಂದ ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್​ ಅರ್ಜಿ ಸಲ್ಲಿಸಿತ್ತು.

ಅಂತೆಯೇ, ಶಾಸಕರಾದ ರಾಜಿಂದರ್ ರಾಣಾ, ಸುಧೀರ್ ಶರ್ಮಾ, ಇಂದರ್ ದತ್ ಲಖನ್‌ಪಾಲ್, ದೇವಿಂದರ್ ಕುಮಾರ್ ಭೂಟೂ, ರವಿ ಠಾಕೂರ್ ಮತ್ತು ಚೇತನ್ಯ ಶರ್ಮಾ ಅವರನ್ನು ಅನರ್ಹಗೊಳಿಸಿ ವಿಧಾನಸಭೆ ಸ್ಪೀಕರ್​ ಆದೇಶಿಸಿದ್ದರು. ಪ್ರಸ್ತುತ ವಿಧಾನಸಭೆಯ ಸದಸ್ಯ ಬಲವು 68 ರಿಂದ 62ಕ್ಕೆ ಇಳಿಕೆಯಾಗಿದೆ. ಕಾಂಗ್ರೆಸ್​ ಶಾಸಕರ ಸಂಖ್ಯೆಯ 40 ರಿಂದ 34ಕ್ಕೆ ಕುಸಿದಿದೆ.

ಬಿಜೆಪಿ ಶಾಸಕರಿಗೆ ನೋಟಿಸ್:ಮತ್ತೊಂದೆಡೆ, ವಿಧಾನಸೌಧದಲ್ಲಿ ಫೆಬ್ರವರಿ 28 ರಂದು ಗದ್ದಲ ಸೃಷ್ಟಿಸಿದ ಆರೋಪದ ಮೇಲೆ ಏಳು ಜನ ಬಿಜೆಪಿ ಶಾಸಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಬಿಜೆಪಿಯ 15 ಶಾಸಕರನ್ನು ಅಮಾನತುಗೊಳಿಸಿದ ಬಳಿಕ ಸದನದಲ್ಲಿ ಗದ್ದಲ ಎಬ್ಬಿಸಿದ ಕಾರಣಕ್ಕೆ ಈ ಶಾಸಕರಿಗೆ ನೋಟಿಸ್ ನೀಡಲಾಗಿದೆ. ಇದನ್ನು ವಿಧಾನಸಭೆ ಸ್ಪೀಕರ್ ​ಕುಲ್ದೀಪ್​​ ಸಿಂಗ್ ಪಠಾನಿಯಾ ಖಚಿತಪಡಿಸಿದ್ದಾರೆ. ವಿಶೇಷಾಧಿಕಾರ ಸಮಿತಿಗೆ ಈ ವಿಷಯವನ್ನು ವಹಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷದ ನಾಯಕ ಜೈರಾಮ್ ಠಾಕೂರ್, ನೋಟಿಸ್‌ಗೆ ಪ್ರತಿಕ್ರಿಯೆ ಸಲ್ಲಿಸಲಾಗುವುದು. ಆದರೆ, ಕಾಂಗ್ರೆಸ್ ಪಕ್ಷವು ವಿಧಾನಸಭೆಯಲ್ಲಿ ಬಹುಮತವನ್ನು ಕಳೆದುಕೊಂಡಿದೆ. ಈಗ ಬಿಜೆಪಿಯ ಏಳು ಶಾಸಕರಿಗೆ ವಿಶೇಷಾಧಿಕಾರ ಸಮಿತಿಯಿಂದ ನೋಟಿಸ್ ಜಾರಿ ಮಾಡುವ ಮೂಲಕ ಸರ್ಕಾರವನ್ನು ಉಳಿಸಲು ಕಾಂಗ್ರೆಸ್ ಷಡ್ಯಂತ್ರ ನಡೆಸುತ್ತಿದೆ ಎಂದು ದೂರಿದರು.

ಇದನ್ನೂ ಓದಿ:ಹಿಮಾಚಲ 'ಕೈ'​ ಸರ್ಕಾರದ ಬಿಕ್ಕಟ್ಟು ಶಮನ: 'ಆಲ್‌ ಇಸ್ ವೆಲ್‌' ಎಂದ ಡಿ.ಕೆ.ಶಿವಕುಮಾರ್‌

ABOUT THE AUTHOR

...view details