ನವದೆಹಲಿ:ಯಾವುದೇ ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳನ್ನು ಹಿಂದಿಕ್ಕಿ 'ನೋಟಾ'ಗೆ (ಮೇಲಿನವರು ಯಾರೂ ಅಲ್ಲ) ಅತಿ ಹೆಚ್ಚು ಮತಗಳು ಬಂದು ಬಹುಮತ ಪಡೆದಾಗ ಒಂದು ಚೌಕಟ್ಟಿನಡಿ ಮಾರ್ಗಸೂಚಿ ಅಥವಾ ನಿಯಮಗಳನ್ನು ರೂಪಿಸುವ ಬಗ್ಗೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ಪರಿಶೀಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿಕೊಂಡಿತು.
ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿ, ಪ್ರತಿಕ್ರಿಯಿಸುವಂತೆ ಸೂಚಿಸಿದೆ. ಸ್ಪೂರ್ತಿದಾಯಕ ಭಾಷಣಕಾರ ಶಿವ ಖೇರಾ ಎಂಬುವರು ಈ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ. ನೋಟಾ ಬಹುಮತ ಪಡೆದರೆ ನಿರ್ದಿಷ್ಟ ಕ್ಷೇತ್ರದಲ್ಲಿ ನಡೆದ ಚುನಾವಣೆಯನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಘೋಷಿಸಿ ಹೊಸದಾಗಿ ಚುನಾವಣೆ ನಡೆಸಲು ನಿಯಮಗಳನ್ನು ರಚಿಸಬೇಕೆಂದು ಅವರು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.
ಅಲ್ಲದೇ, ನೋಟಾವನ್ನು 'ಕಾಲ್ಪನಿಕ ಅಭ್ಯರ್ಥಿ' ಎಂದು ಪರಿಗಣಿಸಬೇಕು. ನೋಟಾ ಹೆಚ್ಚಿನ ಸಂಖ್ಯೆಯ ಮತಗಳನ್ನು ಪಡೆದರೆ ಹೊಸ ಚುನಾವಣೆಗಳನ್ನು ನಡೆಸಬೇಕು ಎಂದು ವಿವಿಧ ರಾಜ್ಯಗಳ ಚುನಾವಣಾ ಆಯೋಗಗಳು ಜಾರಿಗೊಳಿಸಿದ ಆದೇಶಗಳನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ನೋಟಾ ಮತದ ಆಯ್ಕೆಯನ್ನು ಏಕರೂಪವಾಗಿ ಅನುಷ್ಠಾನಗೊಳಿಸಿ, ನೋಟಾಕ್ಕಿಂತ ಕಡಿಮೆ ಮತಗಳನ್ನು ಪಡೆದ ಅಭ್ಯರ್ಥಿಗಳನ್ನು 5 ವರ್ಷಗಳ ಕಾಲ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸುವ ಕುರಿತು ನಿರ್ದೇಶನಗಳನ್ನು ನೀಡಬೇಕೆಂದೂ ಅರ್ಜಿಯಲ್ಲಿ ಕೋರಲಾಗಿದೆ.
ಈ ಅರ್ಜಿಯ ಪ್ರಕಾರ, ಕಳೆದ ವರ್ಷ ಜುಲೈನಲ್ಲಿ ಚುನಾವಣಾ ಆಯೋಗದ ಪತ್ರವೊಂದರಲ್ಲಿ ಅನಿವಾರ್ಯ ಸಂದರ್ಭದಲ್ಲಿ ಅಭ್ಯರ್ಥಿಗಳು ಗಳಿಸಿದ ಮತಗಳ ಸಂಖ್ಯೆಗಿಂತ ನೋಟಾಗೆ ಹೆಚ್ಚು ಮತಗಳು ಬಂದರೆ, ಆಗ ಎಲ್ಲ ಅಭ್ಯರ್ಥಿಗಳ ಪೈಕಿ ಯಾರು ಅಧಿಕ ಮತಗಳನ್ನು ಪಡೆದಿರುತ್ತಾರೋ ಆ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ ಎಂದು ಹೇಳಲಾಗಿದೆ. ಮುಂದುವರೆದು, ಚುನಾವಣಾ ಆಯೋಗವು ಬ್ಯಾಲೆಟ್ ಪೇಪರ್‌ನಲ್ಲಿ 'ನೋಟಾ'ವನ್ನು ಸೇರಿಸಲು ಮತ್ತು ಇದರ ಬಗ್ಗೆ ನಿರ್ದೇಶನಗಳನ್ನು ನೀಡಿದ್ದರೂ 'ನೋಟಾ'ವನ್ನು ಮಾನ್ಯವಾದ ಮತವೆಂದು ಗುರುತಿಸಲು ವಿಫಲವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
'ನೋಟಾ' ವ್ಯವಸ್ಥೆಯ ಬಗ್ಗೆ ಸುಪ್ರೀಂ ಕೋರ್ಟ್ ಚಿಂತನೆ ಮಾಡಿದಾಗ, ಮತದಾರನ ಮನಸ್ಸಿನಲ್ಲಿ ಒಂದು ವ್ಯವಸ್ಥೆಯನ್ನು ಹೊಂದಿರುತ್ತಾನೆ ಮತ್ತು ಯಾವುದೇ ಅಭ್ಯರ್ಥಿಗಳಿಗೆ ಮತ ಹಾಕಲು ನಿರಾಕರಿಸುತ್ತಿದ್ದಾನೆ. ಆ ಮೂಲಕ ಹೊಸ ಅಭ್ಯರ್ಥಿಗಳೊಂದಿಗೆ ಹೊಸ ಚುನಾವಣೆಗೆ ಒತ್ತಾಯಿಸುತ್ತಿದ್ದಾನೆ ಎಂಬುವುದಾಗಿತ್ತು ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
2013ರಲ್ಲಿ ಸರ್ವೋಚ್ಚ ನ್ಯಾಯಾಲಯವು ಎಲ್ಲ ಇವಿಎಂಗಳಲ್ಲಿ 'ನೋಟಾ' ಆಯ್ಕೆಯನ್ನು ಒದಗಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು. ನಕಾರಾತ್ಮಕ ಮತದಾನದ ನಿಬಂಧನೆಯು ಪ್ರಜಾಪ್ರಭುತ್ವವನ್ನು ಉತ್ತೇಜಿಸುವ ಹಿತಾಸಕ್ತಿಯೊಂದಿಗೆ ರಾಜಕೀಯ ಪಕ್ಷಗಳು ಮತ್ತು ಅವರ ಅಭ್ಯರ್ಥಿಗಳ ಬಗ್ಗೆ ಮತದಾರರು ಏನು ಯೋಚಿಸುತ್ತಾರೆ ಎಂಬ ಸ್ಪಷ್ಟ ಸಂದೇಶಗಳನ್ನು ಅದು ರವಾನಿಸುತ್ತದೆ ಎಂದು ತಿಳಿಸಿತ್ತು.
ಇದನ್ನೂ ಓದಿ:ದೇಶದ ಅತಿದೊಡ್ಡ ಲೋಕಸಭಾ ಕ್ಷೇತ್ರ ಮಲ್ಕಾಜ್‌ಗಿರಿಗೆ ಭಾರಿ ಡಿಮ್ಯಾಂಡ್; ಕಣದಲ್ಲಿ 114 ಅಭ್ಯರ್ಥಿಗಳು!