ಚಂಡೀಗಢ: ಕೌಟುಂಬಿಕ ಕಲಹದ ಹಿನ್ನೆಲೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಕೋರ್ಟ್ ಹಾಲ್ ಒಳಗಡೆಯೇ ತನ್ನ ಅಳಿಯನಿಗೆ ಗುಂಡಿಕ್ಕಿ ಕೊಲೆಗೈದಿರುವ ಘಟನೆ ಇಲ್ಲಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಹರ್‌ಪ್ರೀತ್ ಸಿಂಗ್ ಕೊಲೆಗೀಡಾದ ವ್ಯಕ್ತಿ. ಮಾಲ್ವಿಂದರ್ ಸಿಂಗ್ ಸಿಧು ಕೊಲೆ ಮಾಡಿದ ಆರೋಪಿ ಮಾವ.
ಎರಡೂ ಕುಟುಂಬ ಸದಸ್ಯರು ಚಂಡೀಗಢ ಕೌಟುಂಬಿಕ ನ್ಯಾಯಾಲಯಕ್ಕೆ ಕಲಹದ ವಿಚಾರವಾಗಿ ಹಾಜರಾಗಿದ್ದರು. ಫ್ಯಾಮಿಲಿ ಕೋರ್ಟ್ನಲ್ಲಿ ಸಂಧಾನ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಳಿಯನ ಎದೆಗೆ ಮಾವ ಸಿಧು ಗುಂಡು ಹಾರಿಸಿದ್ದಾರೆ. ಇದರಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹರ್‌ಪ್ರೀತ್ ಸಿಂಗ್ನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆಯೇ ಮೃತಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ನ್ಯಾಯಾಲಯದಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಅಲ್ಲಿದ್ದವರೆಲ್ಲ ಭಯದಲ್ಲಿ ಓಡಾಡಿದರು. ಕೆಲವು ನಿಮಿಷದ ಬಳಿಕ ವ್ಯಕ್ತಿಯ ಕೃತ್ಯವೆಂದು ಗೊತ್ತಾಗುತ್ತಿದ್ದಂತೆ ಸ್ಥಳೀಯರೇ ಸೇರಿಕೊಂಡು ಆರೋಪಿ ಸಿಧುನನ್ನು ಹಿಡಿದು ಕೊಠಡಿಯಲ್ಲಿ ಕೂಡಿ ಹಾಕಿದರು. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಸಿಧು ಅವರನ್ನು ಬಂಧಿಸಿ ಬಂದೂಕನ್ನು ವಶಪಡಿಸಿಕೊಂಡರು.