ನವದೆಹಲಿ:ಎನ್ಸಿಪಿ-ಎಸ್ಪಿ ಮುಖ್ಯಸ್ಥ ಶರದ್ ಪವಾರ್ ಗುರುವಾರ 84 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕುಟುಂಬ ಸದಸ್ಯರು ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಹಿತೈಷಿಗಳೊಂದಿಗೆ ಪವಾರ್ ಹುಟ್ಟುಹಬ್ಬ ಆಚರಿಸಿಕೊಂಡರು. ಮಾಜಿ ಕೇಂದ್ರ ಸಚಿವರಾಗಿರುವ ಪವಾರ್ ಅವರು ದೆಹಲಿಯ ತಮ್ಮ 6, ಜನಪಥ್ ನಿವಾಸದಲ್ಲಿ ಖಡ್ಗದಿಂದ ಹುಟ್ಟುಹಬ್ಬದ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಸೇರಿದಂತೆ ಹಲವು ಗಣ್ಯರು ಹಿರಿಯ ನಾಯಕನಿಗೆ ಶುಭ ಕೋರಿದ್ದಾರೆ. ಕಳೆದ ವರ್ಷ ಶರದ್ ಪವಾರ್ ಅವರಿಂದ ಬೇರ್ಪಟ್ಟು ಇತ್ತೀಚಿನ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ದೊಡ್ಡ ಮಟ್ಟದ ಸೋಲುಣಿಸಿದ ಅಜಿತ್ ಪವಾರ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಹುಟ್ಟುಹಬ್ಬದ ಆಚರಣೆಯಲ್ಲಿ ಹಾಜರಾಗಿದ್ದು ಗಮನಾರ್ಹ.
ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಮತ್ತು ಅವರ ಮಗ ಪಾರ್ಥ್ ಪವಾರ್ ಅವರು ಎನ್ಸಿಪಿ ನಾಯಕರಾದ ಪ್ರಫುಲ್ ಪಟೇಲ್, ಛಗನ್ ಭುಜಬಲ್ ಮತ್ತು ಸುನಿಲ್ ತಟ್ಕರೆ ಅವರೊಂದಿಗೆ ಹಿರಿಯ ಪವಾರ್ ಅವರನ್ನು ಭೇಟಿಯಾದರು.
ಪವಾರ್ ಬೆಳವಣಿಗೆಯ ಹಾದಿ ಹೀಗಿದೆ;ಡಿಸೆಂಬರ್ 12, 1940 ರಂದು ಜನಿಸಿದ ಪವಾರ್ ಅವರು ಕಾಲೇಜಿನಲ್ಲಿದ್ದಾಗ ರಾಜಕೀಯಕ್ಕೆ ಧುಮುಕಿದರು ಮತ್ತು ಹಿರಿಯ ಕಾಂಗ್ರೆಸ್ ನಾಯಕ ಯಶವಂತರಾವ್ ಚವಾಣ್ ಅವರ ಆಪ್ತರಾದರು. ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಪವಾರ್ ಅವರು ರಕ್ಷಣಾ ಸಚಿವರಾಗಿ ಮತ್ತು ಕೇಂದ್ರ ಕೃಷಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.