ನವದೆಹಲಿ: ರಾಜ್ಯಸಭಾ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರು ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಸಾತಾರಾ ಮತ್ತು ಫಲ್ಟನ್‌ನ ದಾಳಿಂಬೆ ರೈತರೊಂದಿಗೆ ಮೋದಿಯನ್ನು ಭೇಟಿಯಾದ ಅವರು, ದಾಳಿಂಬೆ ಪೆಟ್ಟಿಗೆಯನ್ನು ಉಡುಗೊರೆಯಾಗಿ ಕೊಟ್ಟರು. ಈ ಕುರಿತು ಮಾಹಿತಿ ನೀಡಿದ ಪವಾರ್, ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ವಿಚಾರಗಳನ್ನು ಚರ್ಚಿಸಿಲ್ಲ ಎಂದರು.
ಫೆಬ್ರವರಿಯಲ್ಲಿ ದೆಹಲಿಯ ತಾಲ್ ಕಟೋರಾ ಕ್ರೀಡಾಂಗಣದಲ್ಲಿ ನಡೆಯಲಿರುವ 98ನೇ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲು ಆಹ್ವಾನಿಸಿ ಪವಾರ್ ಇತ್ತೀಚೆಗೆ ಪ್ರಧಾನಿಗೆ ಪತ್ರ ಬರೆದಿದ್ದರು. ಪ್ರಸಕ್ತ ಭೇಟಿಯ ಸಂದರ್ಭದಲ್ಲಿ ಮೋದಿಯವರ ಮುಂದೆ ಸಾಹಿತ್ಯ ಸಮ್ಮೇಳನದ ವಿಷಯವನ್ನು ಪ್ರಸ್ತಾಪಿಸಲಿಲ್ಲ ಎಂದು ಪವಾರ್ ಪ್ರಧಾನಿಯೊಂದಿಗಿನ ಸಭೆಯ ನಂತರ ಹೇಳಿದರು.
ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರನ್ನು ಕೂಡ ಭೇಟಿಯಾದ ಪವಾರ್, ಅವರಿಗೂ ಮಹಾರಾಷ್ಟ್ರದಲ್ಲಿ ಬೆಳೆಯಲಾದ ದಾಳಿಂಬೆಗಳನ್ನು ಉಡುಗೊರೆಯಾಗಿ ನೀಡಿದರು.