ಕರ್ನಾಟಕ

karnataka

ETV Bharat / bharat

ಲಡ್ಡು ತುಪ್ಪದ ಕಲಬೆರಕೆ ವಿವಾದ: ಪ್ರಾಯಶ್ಚಿತ್ತವಾಗಿ ತಿರುಪತಿಯಲ್ಲಿ ಮಹಾಶಾಂತಿ ಹೋಮ - Shanti Homam in Tirumala - SHANTI HOMAM IN TIRUMALA

ಕೋಟ್ಯಂತರ ಭಕ್ತರ ಆರಾಧ್ಯ ಧೈವವಾದ ತಿರುಪತಿ ತಿಮ್ಮಪ್ಪನ ಮಹಾಪ್ರಸಾದ ಲಡ್ಡುವಿನಲ್ಲಿ ಬಳಸಲಾದ ತುಪ್ಪ ಕಲಬೆರಕೆ ವಿವಾದದ ಬಳಿಕ ಟಿಟಿಡಿಯು ಪ್ರಾಯಶ್ಚಿತ್ತವಾಗಿ ಮಹಾಶಾಂತಿ ಹೋಮ ನಡೆಸಿತು.

ತಿರುಪತಿಯಲ್ಲಿ ಮಹಾಶಾಂತಿ ಹೋಮ
ತಿರುಪತಿಯಲ್ಲಿ ಮಹಾಶಾಂತಿ ಹೋಮ (ETV Bharat)

By ETV Bharat Karnataka Team

Published : Sep 23, 2024, 4:09 PM IST

ತಿರುಮಲ (ಆಂಧ್ರಪ್ರದೇಶ):ವಿಶ್ವವಿಖ್ಯಾತ ತಿರುಪತಿ ದೇವಸ್ಥಾನದಲ್ಲಿ ಮಹಾ ಶಾಂತಿ ಹೋಮ ನಡೆಸಲಾಯಿತು. ಪ್ರಸಾದ ಹಾಗೂ ಲಡ್ಡು ತಯಾರಿಸಲು ಬಳಸುತ್ತಿದ್ದ ತುಪ್ಪ ಕಲಬೆರಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅರ್ಚಕರು ಹಾಗೂ ಟಿಟಿಡಿ ಅಧಿಕಾರಿಗಳು ಶಾಂತಿ ಹೋಮ ನಡೆಸಲು ನಿರ್ಧರಿಸಿದ್ದರು. ಹೀಗಾಗಿ ದೇವಸ್ಥಾನದ ಯಾಗಶಾಲೆಯಲ್ಲಿ ಅರ್ಚಕರು ಬೆಳಗ್ಗೆ 6 ಗಂಟೆಯಿಂದಲೇ ಈ ಹೋಮ ಆರಂಭಿಸಿದ್ದರು.

ತಿಮ್ಮಪ್ಪನ ದೇವಸ್ಥಾನದ ಬಂಗಾರದ ಬಾವಿಯ ಬಳಿ ಇರುವ ಯಾಗಶಾಲೆಯಲ್ಲಿ ಶಾಂತಿ ಹೋಮ ಆರಂಭಿಸಿದರು. ಮೂರು ಕುಂಡಗಳಲ್ಲಿ ಶಾಸ್ತ್ರೋಕ್ತವಾಗಿ ಹೋಮ ನಡೆಯಿತು. ದೇವಾಲಯದ ಎಂಟು ಜನ ಅರ್ಚಕರು ಮತ್ತು ಮೂವರು ಆಗಮ ಪಂಡಿತರು ಹೋಮದಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ 5.40ಕ್ಕೆ ಆರಂಭವಾಗಿ 10 ಗಂಟೆಯೊಳಗೆ ಹೋಮ ಮುಕ್ತಾಯ ಮಾಡಲಾಯಿತು. ವಾಸ್ತು ಹೋಮ, ಪತ್ರಶುದ್ಧಿ, ಯಂತ್ರಶುದ್ಧಿ, ಸ್ಥಳ ಶುದ್ಧಿಯೊಂದಿಗೆ ಅರ್ಚಕರು ಪಂಚಗವ್ಯ ಪ್ರೋಕ್ಷಣೆ ಮಾಡಿದರು.

ಟಿಟಿಡಿ ಇಒ ಶ್ಯಾಮಲಾ ರಾವ್ ಶಾಂತಿಹೋಮದಲ್ಲಿ ಪಾಲ್ಗೊಂಡು ಸಂಕಲ್ಪ ಮಾಡಿದರು. ಶಾಂತಿ ಹೋಮದಲ್ಲಿ ಹೆಚ್ಚುವರಿ ಇಒ ವೆಂಕಯ್ಯ ಚೌಧರಿ, ದೇವಸ್ಥಾನದ ಅರ್ಚಕರು, ಆಗಮ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. ಕಲಬೆರಕೆ ತುಪ್ಪ ಬಳಸಿದ ಎಲ್ಲಾ ಘಟಕಗಳಲ್ಲಿ ಶುದ್ಧಿ ಕಾರ್ಯ ನಡೆಸಲಾಯಿತು. ಇದರಿಂದ ಬೆಳಗ್ಗೆ 6ರಿಂದ 8ರ ವರೆಗೆ ಅನ್ನ ಪ್ರಸಾದ ತಯಾರಿ ಸ್ಥಗಿತಗೊಂಡಿತ್ತು. ಹೋಮದ ನಂತರ, ಸಿಬ್ಬಂದಿ ತಿಮ್ಮಪ್ಪನಿಗೆ ಅನ್ನ ನೈವೇದ್ಯವನ್ನು ತಯಾರಿಸಲು ಪ್ರಾರಂಭಿಸಿದರು.

ಶುದ್ಧ ತುಪ್ಪ ಖರೀದಿ:ತಿಮ್ಮಪ್ಪನ ಭಕ್ತರಿಗೆ ಮಹಾಪ್ರಸಾದವಾಗಿ ನೀಡಲಾಗುವ ಲಡ್ಡಿಗೆ ಶುದ್ಧ ತುಪ್ಪವನ್ನು ಖರೀದಿಸಲಾಗುತ್ತಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಸ್ಪಷ್ಟಪಡಿಸಿದೆ. ತುಪ್ಪದ ಶುದ್ಧತೆಯನ್ನು ನಿರ್ಧರಿಸಲು 18 ಜನರಿರುವ ಸಮಿತಿಯನ್ನು ಸ್ಥಾಪಿಸಲಾಗಿದೆ. ಆಗಸ್ಟ್‌ನಿಂದಲೇ ಕಲಬೆರಕೆ ತುಪ್ಪವನ್ನು ನಿಲ್ಲಿಸಿ, ಶುದ್ಧ ತುಪ್ಪವನ್ನು ಲಡ್ಡುವಿಗೆ ಬಳಸಲಾಗುತ್ತಿದೆ. ಇದರಿಂದ ಭಕ್ತರಲ್ಲಿನ ಆತಂಕವನ್ನು ನಿವಾರಣೆ ಮಾಡಲಾಗಿದೆ. ಆದಾಗ್ಯೂ ಆತಂಕ ಹೋಗಲಾಡಿಸಲು ಶಾಂತಿ ಹೋಮ ನಡೆಸಲಾಗುತ್ತಿದೆ ಎಂದು ಶ್ಯಾಮಲಾ ರಾವ್ ಅವರು ತಿಳಿಸಿದ್ದಾರೆ.

ತಿರುಮಲ ಲಡ್ಡು ಅಪವಿತ್ರವಾಗಿರುವ ಹಿನ್ನೆಲೆಯಲ್ಲಿ ಭಕ್ತರಲ್ಲಿ ಆತ್ಮವಿಶ್ವಾಸ ತುಂಬಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮಾನ್ಯತೆ ಪಡೆದ ಶುದ್ಧ ತುಪ್ಪಕ್ಕೆ ಹೆಸರುವಾಸಿಯಾದ ಕರ್ನಾಟಕದ ನಂದಿನಿ ಬ್ರ್ಯಾಂಡ್​​ನ ತುಪ್ಪವನ್ನು ಖರೀದಿಸುತ್ತಿದ್ದೇವೆ. ತುಪ್ಪದ ಗುಣಮಟ್ಟ ಪರೀಕ್ಷಿಸಲು ಪ್ರಯೋಗಾಲಯವನ್ನು ಸ್ಥಾಪಿಸಲಾಗುತ್ತಿದೆ. ತುಪ್ಪದ ಮಾದರಿಯನ್ನು ಎನ್​ಎಬಿಎಲ್ ಲ್ಯಾಬ್​​ಗೆ ಕಳುಹಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಯೋಗಾಲಯದಲ್ಲಿ ನಕಲಿ ತುಪ್ಪದ ಗುರುತಿಸುವಿಕೆ ನಡೆಯಲಿದೆ. ಕೇಂದ್ರ ಸರ್ಕಾರದ ನೆರವಿನಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಯೋಗಾಲಯವನ್ನು ತಿರುಮಲದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಟಿಟಿಡಿ ತಿಳಿಸಿದೆ.

ಇದನ್ನೂ ಓದಿ:ತಿರುಮಲದಲ್ಲಿ 'ದುಷ್ಟ ಪರಿಣಾಮ' ನಿವಾರಣೆಗೆ ಶಾಂತಿ ಹೋಮ; ಲಡ್ಡು ಅಕ್ರಮದ ತನಿಖೆಗೆ ಎಸ್‌ಐಟಿ ರಚನೆ - ಸಿಎಂ ನಾಯ್ಡು - TIRUPATI LADDU

ABOUT THE AUTHOR

...view details