ಕೊಚ್ಚಿ(ಕೇರಳ):ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಆರೋಪದ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿ ಸಿದ್ಧಪಡಿಸಿರುವ ವರದಿಯು ಮಾಲಿವುಡ್ ಸಿನಿರಂಗವನ್ನೇ ಅಲುಗಾಡಿಸಿದೆ. ಅನೇಕ ಗಣ್ಯರಿಂದ ತಾವು ಕೆಟ್ಟ ಸನ್ನಿವೇಶಗಳನ್ನು ಎದುರಿಸಿದ್ದೇವೆ ಎಂದು ನಟಿಯರು ಆರೋಪಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೇರಳ ಸರ್ಕಾರ 7 ಹಿರಿಯ ಪೊಲೀಸ್ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶ ಹೊರಡಿಸಿದೆ.
ಮಲಯಾಳಿ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಿಖಿ ಅವರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಟಿ ರೇವತಿ ಸಂಪತ್ ಹೇಳಿದ್ದರೆ, ಇತ್ತ ಖ್ಯಾತ ನಿರ್ದೇಶಕ ಮತ್ತು ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದ ರಂಜಿತ್ ಬಾಲಕೃಷ್ಣನ್ ತನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಬಂಗಾಳಿ ನಟಿ ಶ್ರೀಲೇಖಾ ಆರೋಪಿಸಿದ್ದಾರೆ.
ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಿದ್ದಿಕಿ ಮತ್ತು ರಂಜಿತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಗಳ ಕುರಿತಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ಈ ಎಲ್ಲಾ ಆರೋಪಗಳು ಮತ್ತು ನ್ಯಾಯಮೂರ್ತಿ ಹೇಮಾ ಅವರ ವರದಿಯನ್ನು ಆಧರಿಸಿ ತನಿಖೆ ನಡೆಸಲು ಐಜಿ ಸ್ಪರ್ಜನ್ ಕುಮಾರ್ ನೇತೃತ್ವದಲ್ಲಿ 7 ಸದಸ್ಯರ ತಂಡವನ್ನು ರಚಿಸಲು ಆದೇಶಿಸಿದ್ದಾರೆ.