ಭರತ್‌ಪುರ (ರಾಜಸ್ಥಾನ):ದೇಶದ ಹಲವು ಭಾಗಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಇದರಿಂದ ಹಳ್ಳ-ಕೊಳ್ಳ, ನದಿಗಳು ತುಂಬಿ ಹರಿಯುತ್ತಿವೆ. ಜಲಧಾರೆಯ ಸೊಬಗನ್ನು ಕಣ್ತುಂಬಿಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಆದರೆ, ವರ್ಷಧಾರೆಯ ರಭಸಕ್ಕೆ ಹಲವೆಡೆ ಅನಾಹುತಗಳೂ ಸಂಭವಿಸಿವೆ. ರಾಜಸ್ಥಾನದಲ್ಲೂ ಇಂಥಹದ್ದೇ ಅನಾಹುತ ಘಟಿಸಿದೆ. ಇದರಿಂದ ಐವರು ಸ್ನೇಹಿತರು ನೀರುಪಾಲಾಗಿದ್ದಾರೆ.
ಭರತ್‌ಪುರ ಜಿಲ್ಲೆಯ ಬಯಾನ ಎಂಬಲ್ಲಿ ಭಾನುವಾರ ಈ ದುರಂತ ಸಂಭವಿಸಿದೆ. ಇಲ್ಲಿನ ಬಂಗಂಗಾ ನದಿಯು ಉಕ್ಕಿ ಹರಿಯುತ್ತಿದೆ. ನದಿಯಿಂದ ಸೃಷ್ಟಿಯಾದ ಹಲವು ಕೆರೆಗಳು ನೀರು ತುಂಬಿ ಜೀವಕಳೆ ಪಡೆದುಕೊಂಡಿವೆ. ನೀರಿನ ಸೊಬಗನ್ನು ವೀಕ್ಷಿಸಲು ಜನರು ತಂಡೋಪತಂಡಗಳಲ್ಲಿ ಬರುತ್ತಿದ್ದಾರೆ. ಹೀಗೆ ಭಾನುವಾರ ರಜಾ ದಿನ ಕಾರಣ ಜನರು ತುಂಬಿಕೊಂಡಿರುವ ನದಿ ನೀರನ್ನು ವೀಕ್ಷಿಸಲು ಸೇರಿದ್ದರು.
ಇಬ್ಬರ ಶವಗಳು ಪತ್ತೆ:ಈ ವೇಳೆ ನದಿ ದಡದ ಮೇಲೆ ಜನರು ನಿಂತಿದ್ದರು. ಸತತ ಮಳೆಯಿಂದ ದಡದ ಮಣ್ಣು ಒದ್ದೆಯಾಗಿ ಮೃದುವಾಗಿತ್ತು. ಜನರು ಒಂದೇ ಕಡೆ ಸೇರಿದ್ದರಿಂದ ಮಣ್ಣು ಕೆರೆಯೊಳಗೆ ಕುಸಿದಿದೆ. ಇದರಿಂದ ಅಲ್ಲಿ ನೆರೆದಿದ್ದ ಜನರು ನೀರಿನಲ್ಲಿ ಬಿದ್ದಿದ್ದಾರೆ. ಈ ವೇಳೆ ಐದು ಮಂದಿ ಯುವಕರು ನೀರು ಮತ್ತು ಮಣ್ಣಿನಲ್ಲಿ ಸಿಲುಕಿದ್ದಾರೆ. ತಕ್ಷಣವೇ ಅಲ್ಲಿದ್ದ ಜನರು ಯುವಕರ ರಕ್ಷಣೆಗೆ ಧಾವಿಸಿದರೂ, ಅವರು ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದಾರೆ.