ಕೋಟಾ(ರಾಜಸ್ಥಾನ):ಕೋಟಾದಲ್ಲಿ ವಿದ್ಯಾರ್ಥಿಗಳ ಸಾವಿನ ಸರಣಿ ಮುಂದುವರಿದಿದೆ. ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆಗೆ (ನೀಟ್) ತಯಾರಿ ನಡೆಸಲು ಬಂದಿದ್ದ ವಿದ್ಯಾರ್ಥಿನಿ ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು 3 ದಿನಗಳಲ್ಲಿ ಬೆಳಕಿಗೆ ಬಂದ 2ನೇ ಆತ್ಮಹತ್ಯೆ ಪ್ರಕರಣವಾಗಿದ್ದರೆ, ಈ ವರ್ಷದ ಮೂರು ತಿಂಗಳಲ್ಲಿ ನಡೆದ 8ನೇ ಪ್ರಾಣಾಹುತಿಯಾಗಿದೆ.
ಉತ್ತರಪ್ರದೇಶದ ಲಖನೌ ನಿವಾಸಿಯಾದ ವಿದ್ಯಾರ್ಥಿನಿ ಇಲ್ಲಿನ ಮಹಾವೀರ್ ನಗರದಲ್ಲಿ ಪಿಜಿಯಲ್ಲಿ ವಾಸವಾಗಿದ್ದು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಶೈಕ್ಷಣಿಕ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎಂದು ಪೊಲೀಸ್ ಅಧಿಕಾರಿಗಳು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿನಿ ಕಳೆದ ವರ್ಷ ಕೋಟಾಕ್ಕೆ ಬಂದಿರುವ ಮಾಹಿತಿ ಲಭ್ಯವಾಗಿದೆ.
ಜವಾಹರ್ ನಗರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಫೋರೆನ್ಸಿಕ್ ತಂಡವನ್ನೂ ಕರೆಸಲಾಗಿದೆ ಎಂದು ಜವಾಹರ್ ನಗರ ಪೊಲೀಸ್ ಠಾಣಾಧಿಕಾರಿ ಕಮಲೇಶ್ ಕುಮಾರ್ ಶರ್ಮಾ ಹೇಳಿದರು.
ಪೊಲೀಸರು ವಿದ್ಯಾರ್ಥಿನಿಯ ಸಾವಿನ ಸುದ್ದಿಯನ್ನು ಕುಟುಂಬಸ್ಥರಿಗೆ ರವಾನಿಸಿದ್ದಾರೆ. ಕುಟುಂಬಸ್ಥರು ಬಂದ ನಂತರವೇ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಅಲ್ಲಿಯವರೆಗೆ ಮೃತದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
ವರ್ಷದಲ್ಲಿ 8ನೇ ಆತ್ಮಹತ್ಯೆ:ಕೋಟಾದಲ್ಲಿ ಈವರೆಗೂ ಶೈಕ್ಷಣಿಕ ಒತ್ತಡ, ಪರೀಕ್ಷಾ ಭಯ ಸೇರಿ ನಾನಾ ಕಾರಣಗಳಿಗಾಗಿ ಹಲವಾರು ವಿದ್ಯಾರ್ಥಿಗಳು ಪ್ರಾಣ ಹಾನಿ ಮಾಡಿಕೊಂಡಿದ್ದಾರೆ. ಈ ವರ್ಷದಲ್ಲಿ 3 ತಿಂಗಳ ಅಂತರದಲ್ಲಿ 8 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ದಿನಗಳ ಹಿಂದೆ ಅಂದರೆ ಮಾರ್ಚ್ 26ರಂದು ಕೋಟಾದ ವಿಜ್ಞಾನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉತ್ತರ ಪ್ರದೇಶದ ಕನೌಜ್ ಮೂಲದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಕೋಟಾದಲ್ಲಿ ತಂಗಿದ್ದ ಆತ ನೀಟ್‌ಗೆ ತಯಾರಿ ನಡೆಸುತ್ತಿದ್ದ.
ಮೇ 5ರಿಂದ NEET ಪರೀಕ್ಷೆ:ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮೇ 5ರಂದು ನೀಟ್ ಯುಜಿ ಪರೀಕ್ಷೆ ನಡೆಸಲಿದೆ. ಈ ಬಾರಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಸಂಖ್ಯೆ ಸುಮಾರು 25.6 ಲಕ್ಷ ಎಂದು ಅಂದಾಜಿಸಲಾಗಿದೆ. ಪರೀಕ್ಷೆಗೆ ಸುಮಾರು 1 ತಿಂಗಳು ಮತ್ತು 10 ದಿನಗಳು ಉಳಿದಿದ್ದು, ಇಂತಹ ಪರಿಸ್ಥಿತಿಯಲ್ಲಿ ಅಭ್ಯರ್ಥಿಗಳು ನಿರಂತರವಾಗಿ ಒತ್ತಡಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕದ ವಿಚಾರವಾಗಿದೆ.
ಇದನ್ನೂ ಓದಿ:ಕೋಟಾದಲ್ಲಿ ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ: ಈ ವರ್ಷದ ಎರಡನೇ ಪ್ರಕರಣ