ತಿರುವನಂತಪುರಂ: ಪ್ರವಾಹ ಪೀಡಿತ ಪ್ರದೇಶ ವಯನಾಡಿನಲ್ಲಿ ಅಂತಿಮ ಹಂತದ ರಕ್ಷಣಾ ಕಾರ್ಯ ನಡೆಯುತ್ತಿದೆ. ಆದ್ರೆ ಇನ್ನು ಕೂಡ 206 ಮಂದಿ ಕಣ್ಮರೆಯಾಗಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಾಲಿಯಾರ್ ನದಿಯಲ್ಲಿ ಮೃತದೇಹ ಮತ್ತು ದೇಹದ ಭಾಗಗಳನ್ನು ಪತ್ತೆ ಮಾಡುವುದು ದೊಡ್ಡ ಸವಾಲಾಗಿದೆ. ಇಲ್ಲಿಯವರೆಗೆ 215 ಮೃತದೇಹಗಳು ಪತ್ತೆಯಾಗಿದ್ದು, ಇದರಲ್ಲಿ 87 ಮಂದಿ ಮಹಿಳೆಯರು, 98 ಮಂದಿ ಪುರುಷರು ಮತ್ತು 30 ಮಕ್ಕಳ ಸೇರಿದ್ದಾರೆ. 148 ಮೃತ ದೇಹಗಳನ್ನು ಸಂಬಂಧಿಕರಿಗೆ ಒಪ್ಪಿಸಲಾಗಿದೆ. ಗಾಯಗೊಂಡವರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ದುರಂತದಲ್ಲಿ ಸಾವನ್ನಪ್ಪಿದ 67 ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಇವರ ಅಂತಿಮ ಕಾರ್ಯವನ್ನು ಪಂಚಾಯತ್ ನೆರವೇರಿಸಲಿದೆ. ನಾಪತ್ತೆಯಾಗಿರುವ ಮೃತ ದೇಹಗಳ ಪತ್ತೆಗೆ ಹುಡುಕಾಟ ಕಾರ್ಯ ಸಾಗಿದ್ದು, ಈ ಕಾರ್ಯದಲ್ಲಿ ಎನ್ಡಿಆರ್ಎಫ್, ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಪೊಲೀಸ್, ಭಾರತೀಯ ಸೇನೆ ಮತ್ತು ತಮಿಳುನಾಡಿನ ಸ್ವಯಂ ಸಂಘಟಕರು ಸೇರಿದಂತೆ 1,419 ಮಂದಿ ಸೇರಿದ್ದಾರೆ.
ಕೆ- 9 ದಳಗಳು ಮತ್ತು ತಮಿಳುನಾಡಿನ ವೈದ್ಯಕೀಯ ತಂಡ ಕೂಡ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಮಾನವ ರಕ್ಷಣಾ ರಾಡರ್ ಮತ್ತು ಡ್ರೋನ್ ಆಧಾರಿತ ರಾಡರ್ ಅನ್ನು ಪತ್ತೆ ಕಾರ್ಯಕ್ಕೆ ಬಳಕೆ ಮಾಡಲಾಗಿದೆ ಎಂದರು.
ಪುನರ್ವಸತಿ ಪ್ರಯತ್ನ ಕುರಿತು ಮಾತನಾಡಿದ ಸಿಎಂ, ಸಂತ್ರಸ್ತರಿಗೆ ಸುರಕ್ಷಿತ ಪ್ರದೇಶ ಪತ್ತೆ ಮಾಡಿ, ಅಲ್ಲಿ ಪಟ್ಟಣ ನಿರ್ಮಾಣ ಮಾಡಲಾಗುವುದು. ಈ ಪ್ರದೇಶದಲ್ಲಿ ನಾಶಗೊಂಡ ಶಾಲೆಗಳಿಗೆ ಶಿಕ್ಷಣ ಸಚಿವರು ಭೇಟಿ ನೀಡಲಿದ್ದಾರೆ. ಘಟನೆಯಿಂದ ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಲಿದ್ದಾರೆ ಎಂದು ಹೇಳಿದರು.