ನವದೆಹಲಿ: ಕೇಂದ್ರ ಸರ್ಕಾರದ ಫ್ಯಾಕ್ಟ್ ಚೆಕ್ ಯುನಿಟ್ (Fact Check Unit)ನ ಕಾರ್ಯ ನಿರ್ವಹಣೆಗೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ. ಎಫ್‌ಸಿಯು ಸಕ್ರಿಯಗೊಳಿಸುವ ನಿಯಮಗಳ ಕಾನೂನುಬದ್ಧತೆಯ ವಿಚಾರಣೆಯ ನಂತರ ಬಾಂಬೆ ಹೈಕೋರ್ಟ್‌ನ ಮೂರನೇ ನ್ಯಾಯಮೂರ್ತಿಗಳ ಪೀಠವು ತೀರ್ಪು ನೀಡುವವರೆಗೆ ಈ ತಡೆಯಾಜ್ಞೆ ಜಾರಿಯಲ್ಲಿ ಇರಲಿದೆ.
ಸರ್ಕಾರದ ವ್ಯವಹಾರಗಳಿಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ವಿಷಯಗಳ ನಿಗಾ ವಹಿಸಲು ಈ ಫ್ಯಾಕ್ಟ್ ಚೆಕ್ ಯುನಿಟ್ ಸ್ಥಾಪಿಸಲಾಗಿತ್ತು. 2023ರ ಏಪ್ರಿಲ್ನಲ್ಲಿ ಜಾರಿಗೆ ಬಂದ ತಿದ್ದುಪಡಿಯಾದ ಐಟಿ ನಿಯಮಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕೇಂದ್ರ ಸರ್ಕಾರ ಮತ್ತು ಅದರ ಏಜೆನ್ಸಿಗಳಿಗೆ ಸಂಬಂಧಿಸಿದ ಸುಳ್ಳು ಮಾಹಿತಿ ಪತ್ತೆ ಮಾಡುವ ಅಧಿಕಾರವನ್ನು ಹೊಂದಿದ ಶಾಸನಬದ್ಧ ಸಂಸ್ಥೆ ಇದಾಗಿತ್ತು. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಪತ್ರಿಕಾ ಮಾಹಿತಿ ಬ್ಯೂರೋ (Press Information Bureau) ಅಡಿ ಈ ಎಫ್‌ಸಿಯು ಸ್ಥಾಪನೆಗೆ ಮಾರ್ಚ್ 20ರಂದು ಅಧಿಸೂಚನೆ ಹೊರಡಿಸಿತ್ತು. ಇದರ ಮರು ದಿನವೇ ಸರ್ವೋಚ್ಛ ನ್ಯಾಯಾಲಯವು ಫ್ಯಾಕ್ಟ್ ಚೆಕ್ ಘಟಕದ ಕಾರ್ಯಾಚರಣೆಗೆ ತಡೆ ಕೊಟ್ಟಿದೆ.
ಈ ಬಗ್ಗೆ ಹಾಸ್ಯನಟ ಕುನಾಲ್ ಕಮ್ರಾ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದಿಂದ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಅರ್ಜಿ ವಿಚಾರಣೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಫ್ಯಾಕ್ಟ್ ಚೆಕ್ ಯುನಿಟ್ ಸ್ಥಾಪಿಸಲು ಅನುವು ಮಾಡಿಕೊಡುವ ಐಟಿ ನಿಯಮಗಳು - 2023ಕ್ಕೆ ತಡೆಯಾಜ್ಞೆ ನೀಡಿದೆ.
ಮಧ್ಯಂತರ ಪರಿಹಾರಕ್ಕಾಗಿ ಅರ್ಜಿ ತಿರಸ್ಕರಿಸಿದ್ದೇವೆ. ಆದರೆ, ಇದರ ನಂತರ ಕೇಂದ್ರ ಸರ್ಕಾರವು 2024ರ ಮಾರ್ಚ್ 20ರಂದು ಹೊರಡಿಸಿದ ಅಧಿಸೂಚನೆ ತಡೆಹಿಡಿಯುವ ಅಗತ್ಯವಿದೆ ಎಂದು ನಾವು ಸ್ಪಷ್ಟವಾಗಿ ಭಾವಿಸುತ್ತೇವೆ. ಈ ವಿಷಯವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು ಎಂದು ನ್ಯಾಯ ಪೀಠ ತಿಳಿಸಿದೆ. ಎಫ್‌ಸಿಯು ಸಿಂಧುತ್ವದ ಕುರಿತು ಹೈಕೋರ್ಟ್ ವಿಭಾಗೀಯ ಪೀಠದ ವಿಭಜಿತ ತೀರ್ಪಿನ ನಂತರ ಮೂರನೇ ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಬಾಂಬೆ ಹೈಕೋರ್ಟ್‌ನ ಅಂತಿಮ ಆದೇಶಗಳು ಬಾಕಿ ಉಳಿದಿದ್ದು, ಎಫ್‌ಸಿಯು ಅನ್ನು ಸಕ್ರಿಯಗೊಳಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದೆ. ಇದೇ ವೇಳೆ, ಮಧ್ಯಂತರ ಪರಿಹಾರ ನಿರಾಕರಿಸಿದ ಮೂರನೇ ನ್ಯಾಯಾಮೂರ್ತಿಗಳ ಅಭಿಪ್ರಾಯವನ್ನು ನ್ಯಾಯ ಪೀಠ ತಳ್ಳಿಹಾಕಿದೆ.
ಅರ್ಜಿದಾರರ ಪರ ವಕೀಲರಾದ ಶಾದನ್ ಫರಾಸತ್, ಗೌತಮ್ ಭಾಟಿಯಾ ಮತ್ತು ಹಿರಿಯ ವಕೀಲ ಡೇರಿಯಸ್ ಖಂಬಾಟಾ ಮತ್ತು ಕೇಂದ್ರ ಸರ್ಕಾರವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿನಿಧಿಸಿದ್ದರು. ವಿಚಾರಣೆ ಸಮಯದಲ್ಲಿ ಭಾಟಿಯಾ, ಮಧ್ಯವರ್ತಿಗಳಿಗೆ ಸುರಕ್ಷಿತ ಪ್ರತಿರಕ್ಷೆ ಬಹಳ ಮುಖ್ಯವಾಗಿದೆ. ಅದನ್ನು ದುರ್ಬಲಗೊಳಿಸುವ ಯಾವುದೇ ನಿಯಮವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಹೇಳಿದರು. ಮತ್ತೊಂದೆಡೆ, ಫರಾಸತ್, ಒಬ್ಬ ತನಿಖಾ ಪತ್ರಕರ್ತ ಮೂಲಗಳ ಮೂಲಕ ಮಾಹಿತಿ ಪಡೆಯುವುದು ಹೇಗೆ?. ಈ ನಿಯಮವು ಎಲ್ಲ ಮೂಲಗಳನ್ನು ಹೊರಹಾಕಲು ಅನುಮತಿಸುತ್ತದೆ. ಕಳೆದ 5 ವರ್ಷಗಳಲ್ಲಿ ಸರ್ಕಾರದ ಸಾಧನೆಯ ಸತ್ಯವನ್ನು ಸಾರ್ವಜನಿಕರು ನಿರ್ಧರಿಸಬೇಕಾದಾಗ ಈ ನಿಯಮವನ್ನು ಪರಿಚಯಿಸಲು ಇದು ಕೆಟ್ಟ ಸಮಯ ಎಂದು ವಾದಿಸಿದರು.
ಇದನ್ನೂ ಓದಿ:ಚುನಾವಣಾ ಆಯುಕ್ತರ ನೇಮಕ ಸಮಿತಿಯಲ್ಲಿ ನ್ಯಾಯಾಂಗ ಸದಸ್ಯರು ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್ - ELECTION COMMISSIONERS