ನವದೆಹಲಿ:ವಿವಾದಿತ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಆಪ್) ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ವಿಜಯಿ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಘೋಷಣೆ ಮಾಡಿದೆ. ಅಸಿಂಧುಗೊಳಿಸಲಾದ ಎಂಟು ಬ್ಯಾಲೆಟ್ ಪೇಪರ್‌ಗಳನ್ನು ಸರ್ವೋಚ್ಛ ನ್ಯಾಯಾಲಯವು ಮಾನ್ಯವೆಂದು ಪರಿಗಣಿಸಿದ್ದು, ಚುನಾವಣಾಧಿಕಾರಿ ಅನಿಲ್ ಮಸಿಹ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಚಂಡೀಗಢ ಮೇಯರ್ ಚುನಾವಣೆಯಲ್ಲಿ ಜನವರಿ 30ರಂದು ಪ್ರಕಟವಾದ ಫಲಿತಾಂಶಗಳನ್ನು ಬದಿಗಿಟ್ಟಿರುವ ಸುಪ್ರೀಂ ಕೋರ್ಟ್, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ನೇಮಿಸಿದ ನ್ಯಾಯಾಂಗ ಅಧಿಕಾರಿಯು ಸಲ್ಲಿಸಿದ ಬ್ಯಾಲೆಟ್ ಪೇಪರ್‌ಗಳನ್ನು ಪರಿಶೀಲಿಸಿತು. ಈ ವೇಳೆ, ರದ್ದಾದ ಎಂಟು ಮತಪತ್ರಗಳನ್ನು ಮಾನ್ಯವೆಂದು ಪರಿಗಣಿಸಿತು.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಈ ಮತಪತ್ರಗಳನ್ನು ಪರಿಶೀಲಿಸಿದ ನಂತರ ಎಂಟು ಮಂದಿಯನ್ನು ಮಾನ್ಯವೆಂದು ಪರಿಗಣಿಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ, ಮೇಯರ್ ಚುನಾವಣೆಯನ್ನು ನಡೆಸಿದ ಚುನಾವಣಾಧಿಕಾರಿ ಅನಿಲ್ ಮಸಿಹ್ ನಡೆಯನ್ನು ಖಂಡಿಸಿದ ನ್ಯಾಯಪೀಠವು, ಸಿಆರ್‌ಪಿಸಿ ಸೆಕ್ಷನ್ 340ರಡಿಯಲ್ಲಿ ವಿಚಾರಣೆಯನ್ನು ಪ್ರಾರಂಭಿಸಲು ಪ್ರಕರಣ ದಾಖಲಿಸಲಾಗಿದೆ. ಈ ಸೆಕ್ಷನ್ ಅಡಿಯಲ್ಲಿ ನಿಮ್ಮ ವಿರುದ್ಧ ಏಕೆ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂಬುವುದಕ್ಕೆ ಕಾರಣ ತಿಳಿಸಿ ಎಂದು ಅನಿಲ್ ಮಸಿಹ್‌ಗೆ ನೋಟಿಸ್ ನೀಡುವಂತೆ ನ್ಯಾಯಾಂಗ ರಿಜಿಸ್ಟ್ರಾರ್ಗೆ ನಿರ್ದೇಶಿಸಿತು.
ಇದನ್ನೂ ಓದಿ:ಚಂಡೀಗಢದ ನೂತನ ಮೇಯರ್ ಸ್ಥಾನಕ್ಕೆ ಮನೋಜ್ ಸೋಂಕರ್ ರಾಜೀನಾಮೆ
ಇದೇ ವೇಳೆ, ಕುಲದೀಪ್ ಕುಮಾರ್ ಪರವಾಗಿ ಚಲಾವಣೆಯಾದ ಎಂಟು ಮತಗಳು ಅಮಾನ್ಯವಾಗಲು ಕಾರಣವಾದ ಎಣಿಕೆ ಪ್ರಕ್ರಿಯೆಯಲ್ಲಿನ ತಪ್ಪುಗಳನ್ನು ಎದುರಿಸಲು ಮತ್ತು ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ರದ್ದುಗೊಳಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಜೊತೆಗೆ ಎಂಟು ಮತಪತ್ರಗಳನ್ನು ವಿರೂಪಗೊಳಿಸಲು ಚುನಾವಣಾಧಿಕಾರಿ ಅನಿಲ್ ಮಸಿಹ್ ಉದ್ದೇಶಪೂರ್ವಕ ಪ್ರಯತ್ನವನ್ನು ಮಾಡಿರುವುದು ಸ್ಪಷ್ಟವಾಗಿದೆ ಎಂದು ಸಿಜೆಐ ನೇತೃತ್ವದ ಪೀಠವು ತಿಳಿಸಿದೆ.
ಚಂಡೀಗಢ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದವು. ಇದರಿಂದ ಸುಲಭವಾಗಿ ಮೇಯರ್ ಸ್ಥಾನವನ್ನು ಆಪ್-ಕಾಂಗ್ರೆಸ್ ಮೈತ್ರಿ ಪಡೆಯಬಹುದಿತ್ತು. ಆದರೆ, ಚುನಾವಣಾಧಿಕಾರಿ ಅನಿಲ್ ಮಸಿಹ್ ಎಂಟು ಬ್ಯಾಲೆಟ್ ಪೇಪರ್‌ಗಳನ್ನು ಅಸಿಂಧು ಎಂದು ಘೋಷಿಸಿದ್ದರು. ಇದರಿಂದ ಆಪ್ ಅಭ್ಯರ್ಥಿ ಕುಲದೀಪ್ ಕುಮಾರ್ 12 ಮತಗಳು ಪಡೆದರೆ, ಪ್ರತಿಸ್ಪರ್ಧಿ ಬಿಜೆಪಿಯ ಮನೋಜ್ ಸೋಂಕರ್ 16 ಮತಗಳು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು.
ಆದರೆ, ಚುನಾವಣಾಧಿಕಾರಿ ಎಂಟು ಬ್ಯಾಲೆಟ್ ಪೇಪರ್‌ಗಳನ್ನು ತಾವೇ ತಿದ್ದುವ ಮೂಲಕ ಅಸಿಂಧು ಎಂದು ಘೋಷಿಸಿದ್ದಾರೆ ಎಂದು ಆಪ್-ಕಾಂಗ್ರೆಸ್ ಆರೋಪಿಸಿತ್ತು. ಇದು ವಿವಾದಕ್ಕೆ ಕಾರಣವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇದರ ಬೆನ್ನಲ್ಲೇ ಬಿಜೆಪಿಯ ಸೋಂಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೂ, ಆಪ್ನ ಮೂವರು ಕೌನ್ಸಿಲರ್‌ಗಳನ್ನು ತನ್ನತ್ತ ಸೆಳೆಯುವಲ್ಲಿ ಬಿಜೆಪಿಗೆ ಯಶಸ್ಸು ಕಂಡಿದೆ. ಇದೀಗ ಆಪ್ ಅಭ್ಯರ್ಥಿ ಕುಲದೀಪ್ ಕುಮಾರ್ ಅವರೇ ವಿಜಯಿ ಎಂದು ಸುಪ್ರೀಂ ಕೋರ್ಟ್ ಪ್ರಕಟಿಸಿದೆ.
ಇದನ್ನೂ ಓದಿ:'ಪ್ರಜಾಪ್ರಭುತ್ವದ ಕಗ್ಗೊಲೆ': ಚಂಡೀಗಢ ಮೇಯರ್ ಚುನಾವಣೆ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ