ನವದೆಹಲಿ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬುಧವಾರ ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಈ ವಿಷಯದಲ್ಲಿ ಮೊದಲಿಗೆ ಜಾರ್ಖಂಡ್ ಹೈಕೋರ್ಟ್ನ ಕದ ತಟ್ಟುವಂತೆ ಸೊರೆನ್ ಪರ ವಾದಿಸುತ್ತಿರುವ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಎ.ಎಂ.ಸಿಂಘ್ವಿ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿತು.
ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ, ನ್ಯಾಯಾಲಯಗಳು ಎಲ್ಲರಿಗೂ ಮುಕ್ತವಾಗಿವೆ ಮತ್ತು ಸೊರೇನ್ ಹೈಕೋರ್ಟ್ಗೆ ಹೋಗಲಿ ಎಂದು ಸಿಬಲ್ ಅವರಿಗೆ ತಿಳಿಸಿತು. ಈ ವಿಷಯದ ತುರ್ತು ವಿಚಾರಣೆಯನ್ನು ಕೋರಿ ಸಿಬಲ್ ಗುರುವಾರ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಮುಂದೆ ಮನವಿ ಸಲ್ಲಿಸಿದ್ದರು. ಇದರ ನಂತರ ಈ ವಿಷಯವನ್ನು ಶುಕ್ರವಾರ ಪಟ್ಟಿ ಮಾಡಲು ಸಿಜೆಐ ಒಪ್ಪಿಕೊಂಡಿದ್ದರು.
ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ಬೇಲಾ ಎಂ.ತ್ರಿವೇದಿ ಅವರನ್ನು ಕೂಡ ಒಳಗೊಂಡ ನ್ಯಾಯಪೀಠದ ಮುಂದೆ ಸಿಬಲ್ ಮತ್ತು ಸಿಂಘ್ವಿ ಈ ವಿಷಯವನ್ನು ಈಗಲೇ ಆಲಿಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಖನ್ನಾ, ಹೈಕೋರ್ಟ್ಗಳು ಕೂಡ ಸಾಂವಿಧಾನಿಕ ನ್ಯಾಯಾಲಯಗಳಾಗಿವೆ ಮತ್ತು ನಾವು ಒಬ್ಬ ವ್ಯಕ್ತಿಗೆ ಅನುಮತಿ ನೀಡಿದರೆ, ಎಲ್ಲರಿಗೂ ಅದೇ ರೀತಿ ಅನುಮತಿ ನೀಡಬೇಕಾಗುತ್ತದೆ ಎಂದು ಹೇಳಿದರು.
ಈ ಪ್ರಕರಣ ಏನಿದೆ ಎಂಬ ಬಗ್ಗೆ ವಿವರಿಸಲು ಅವಕಾಶ ನೀಡಬೇಕೆಂದು ವಿಚಾರಣೆಯ ಸಮಯದಲ್ಲಿ ಸಿಬಲ್ ಅವರು ನ್ಯಾಯಪೀಠವನ್ನು ಒತ್ತಾಯಿಸಿದರು. ಇದಕ್ಕೆ "ನೀವು ಹೈಕೋರ್ಟ್ಗೆ ಹೋಗಬೇಕು ಎಂದು ಈ ನ್ಯಾಯಾಲಯ ಆದೇಶ ಮಾಡಿದೆ" ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು. ಹೈಕೋರ್ಟ್ ಕೂಡ ಸಾಂವಿಧಾನಿಕ ನ್ಯಾಯಾಲಯವಾಗಿದೆ ಮತ್ತು ಸೊರೆನ್ ಅವರ ವಕೀಲರು ಅದರ ಮುಂದೆ ಹೋಗಲಿ ಎಂದು ನ್ಯಾಯಮೂರ್ತಿ ಖನ್ನಾ ಪುನರುಚ್ಚರಿಸಿದರು.
ಆದಾಗ್ಯೂ ಸಿಬಲ್ ಮತ್ತು ಸಿಂಘ್ವಿ ತಮ್ಮ ಮನವಿಗಳನ್ನು ಆಲಿಸುವಂತೆ ನ್ಯಾಯಾಲಯಕ್ಕೆ ಒತ್ತಾಯಿಸಿದರು. "ದಯವಿಟ್ಟು ಹೈಕೋರ್ಟ್ ಗೆ ಹೋಗಿ. ನಾವು ಇದನ್ನು ಪರಿಗಣಿಸುವುದಿಲ್ಲ. ಈ ವಿಷಯದಲ್ಲಿ ಸ್ಥಿರವಾದ ದೃಷ್ಟಿಕೋನವನ್ನು ತೆಗೆದುಕೊಂಡಿದ್ದೇವೆ" ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು.