ಕರ್ನಾಟಕ

karnataka

ETV Bharat / bharat

ವರದಕ್ಷಿಣೆ, ಕೌಟುಂಬಿಕ ಹಿಂಸಾಚಾರ ಕಾನೂನು ಮರುಪರಿಶೀಲನೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​ - SUPREME COURT

ವರದಕ್ಷಿಣೆ ಮತ್ತು ಕೌಟುಂಬಿಕ ಹಿಂಸಾಚಾರ ಕಾನೂನುಗಳ ದುರುಪಯೋಗ ತಡೆಯಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್​ ನಿರಾಕರಿಸಿದೆ.

ಸುಪ್ರೀಂಕೋರ್ಟ್​
ಸುಪ್ರೀಂಕೋರ್ಟ್​ (ANI)

By ETV Bharat Karnataka Team

Published : Jan 27, 2025, 3:25 PM IST

Updated : Jan 27, 2025, 4:08 PM IST

ನವದೆಹಲಿ :ವರದಕ್ಷಿಣೆ ಮತ್ತು ಕೌಟುಂಬಿಕ ಹಿಂಸಾಚಾರ ಕಾನೂನುಗಳನ್ನು ಮಹಿಳೆಯರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದರ ತಡೆಗೆ ಕಾನೂನುಗಳ ಪರಿಶೀಲನೆ ಮತ್ತು ಸುಧಾರಣೆಗೆ ತಜ್ಞರ ಸಮಿತಿ ರಚಿಸಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠವು ಈ ಅರ್ಜಿಯನ್ನು ವಜಾ ಮಾಡಿ, "ಸಮಾಜ ಬದಲಾಗಬೇಕಿದೆ. ಈ ನಿಟ್ಟಿನಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ" ಎಂದು ಹೇಳಿತು.

ಕಳೆದ ವರ್ಷ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಎಂಬವರ ಆತ್ಮಹತ್ಯೆ ಪ್ರಕರಣವು ದೇಶಾದ್ಯಂತ ದೊಡ್ಡ ಸುದ್ದಿ ಮಾಡಿತ್ತು. ತನ್ನ ಆತ್ಮಹತ್ಯೆಗೆ ಪತ್ನಿಯ ಕಿರುಕುಳವೇ ಕಾರಣ ಎಂದು ವಿಡಿಯೋ ಮಾಡಿದ್ದ. ಇದರ ಬೆನ್ನಲ್ಲೇ, ಮಹಿಳೆಯರ ಪರವಾಗಿರುವ ವರದಕ್ಷಿಣೆ, ಕೌಟುಂಬಿಕ ಹಿಂಸಾಚಾರ ತಡೆ ಕಾನೂನುಗಳ ಸುಧಾರಣೆ ಮತ್ತು ಅವುಗಳ ದುರುಪಯೋಗ ತಡೆಯುವಂತೆ ಕೋರಿ ವಕೀಲ ವಿಶಾಲ್ ತಿವಾರಿ ಅವರು ಡಿಸೆಂಬರ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇಂದು ನಡೆದ ಕೋರ್ಟ್​ ಕಲಾಪದಲ್ಲಿ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದ ನ್ಯಾಯಮೂರ್ತಿ ನಾಗರತ್ನ ಅವರು, "ಸಮಾಜವು ಬದಲಾವಣೆಗೆ ಒಗ್ಗಿಕೊಳ್ಳಬೇಕಿದೆ. ದುರುಪಯೋಗ ತಡೆಗೆ ಕಾನೂನುಗಳಿವೆ. ಹೀಗಾಗಿ, ನಾವು ಏನನ್ನೂ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಅರ್ಜಿದಾರರ ವಾದವೇನು?:ಕೌಟುಂಬಿಕ ಹಿಂಸಾಚಾರ ತಡೆ ಮತ್ತು ವರದಕ್ಷಿಣೆ ಕಾನೂನುಗಳು ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ತಡೆಯಲು ರೂಪಿಸಲಾಗಿದೆ. ಆದರೆ, ಇದನ್ನೇ ಬಳಸಿಕೊಳ್ಳುತ್ತಿರುವ ಕೆಲವರು ಕಾನೂನಿನ ಅನಿಯಮಿತ ನಿಯಂತ್ರಣದಿಂದ ಪತಿಯನ್ನು ಹಿಂಸಿಸುತ್ತಿದ್ದಾರೆ. ಕಾನೂನುಗಳನ್ನು ಮರುಪರಿಶೀಲಿಸಲು ಮತ್ತು ಅವುಗಳ ನಿರೂಪಣೆಗೆ ಸಮಿತಿ ರಚಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಈ ಕಾನೂನುಗಳ ದುರುಪಯೋಗ ತಡೆಯಲು ಸೂಕ್ತ ಮಾರ್ಗಸೂಚಿಗಳನ್ನು ರಚಿಸಬೇಕು. ಜೊತೆಗೆ, ವಿವಾಹದ ವೇಳೆ ನೀಡಲಾದ ವಸ್ತುಗಳು, ಉಡುಗೊರೆಗಳು, ಹಣ ಸೇರಿದಂತೆ ಯಾವುದೇ ಕೊಡುಗೆಗಳನ್ನು ಅಧಿಕೃತವಾಗಿ ದಾಖಲಿಸಬೇಕು. ಇದನ್ನು ಅಫಿಡವಿಟ್​​ ಮಾದರಿಯಲ್ಲಿ ನಿರ್ವಹಿಸಲು ರಾಜ್ಯ ಸರ್ಕಾರಗಳಿಗೆ ಸೂಚಿಸಬೇಕು. ಇವೆಲ್ಲವನ್ನೂ ವಿವಾಹ ನೋಂದಣಿ ಪ್ರಮಾಣಪತ್ರದ ಜೊತೆ ಜೋಡಿಸಬೇಕು ಎಂದು ಮನವಿ ಮಾಡಲಾಗಿತ್ತು.

ಕಾನೂನಿನ ಮೇಲೆಯೇ ಕರಿಛಾಯೆ:ವರದಕ್ಷಿಣೆ ನಿಷೇಧ ಕಾಯ್ದೆ ಮತ್ತು ಐಪಿಸಿಯ ಸೆಕ್ಷನ್ 498A ಕಾನೂನುಗಳು ವಿವಾಹಿತ ಮಹಿಳೆಯರನ್ನು ವರದಕ್ಷಿಣೆ ಕಿರುಕುಳದಿಂದ ರಕ್ಷಿಸುವ ಉದ್ದೇಶ ಹೊಂದಿವೆ. ಆದರೆ, ಪತಿ- ಪತ್ನಿಯ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ಈ ಕಾನೂನುಗಳನ್ನೇ ಬಳಸಿಕೊಂಡು ಮಹಿಳೆಯರು ಪತಿ ಮತ್ತು ಆತನ ಕುಟುಂಬವನ್ನು ನಿಯಂತ್ರಿಸಲು ಆಯುಧವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ವಿವಾಹಿತ ಪುರುಷರ ಮೇಲೆ ಸುಳ್ಳು ಆರೋಪ ಮಾಡುವುದರಿಂದ ಮಹಿಳೆಯರಿಗೆ ಇರುವ ರಕ್ಷಣಾ ಕಾನೂನುಗಳ ಮೇಲೆಯೇ ಕರಿಛಾಯೆ ಮೂಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ವರದಕ್ಷಿಣೆ, ಕೌಟುಂಬಿಕ ಹಿಂಸಾಚಾರ ಕಾಯ್ದೆಗಳ ಪರಿಶೀಲನೆಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ

Last Updated : Jan 27, 2025, 4:08 PM IST

ABOUT THE AUTHOR

...view details