ಸಂಭಾಲ್ (ಉತ್ತರ ಪ್ರದೇಶ):46 ವರ್ಷಗಳಿಂದ ಬಂದ್ ಆಗಿದ್ದ ಮಂದಿರವೊಂದನ್ನು ಜಿಲ್ಲಾಡಳಿತವು ಮತ್ತೆ ತೆರೆದಿದ್ದು, ಇಲ್ಲಿನ ಹಿಂದೂ ಸಮುದಾಯದಲ್ಲಿ ಹರ್ಷ ಮನೆ ಮಾಡಿದೆ. ಮತ್ತೆ ದರ್ಶನಕ್ಕೆ ಮುಕ್ತವಾಗಿರುವ ಶಿವ ದೇವಾಲಯದಲ್ಲಿ ಪೂಜೆ ಸಲ್ಲಿಸಲು ದೂರ ದೂರದ ಪ್ರದೇಶಗಳಿಂದ ಹಿಂದೂ ಸಮುದಾಯದವರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಎಸ್ಪಿ ಸಂಸದ ಜಿಯಾವುರ್ ರೆಹಮಾನ್ ಬರ್ಕ್ ಅವರಿಗೆ ಸೇರಿದ ಖಗ್ಗು ಸರೈ ಪ್ರದೇಶದಲ್ಲಿ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ವಿದ್ಯುತ್ ಕಳವು ಪತ್ತೆ ಕಾರ್ಯಾಚರಣೆ ನಡೆಸುತ್ತಿರುವಾಗ ಈ ಮಂದಿರ ಪತ್ತೆಯಾಗಿದೆ. 46 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಖಗ್ಗು ಸರೈ ಮೊಹಲ್ಲಾದ ಈ ಶಿವ ದೇವಾಲಯದ ಬೀಗಗಳನ್ನು ಅಧಿಕಾರಿಗಳು ಈಗ ತೆರೆದಿದ್ದಾರೆ. ದೇವಾಲಯದಲ್ಲಿ ಶಿವಲಿಂಗ ಮತ್ತು ಹನುಮಾನ್ ಜಿ ವಿಗ್ರಹಗಳಿವೆ.
ದಶಕಗಳ ನಂತರ ಶಿವ ದೇವಾಲಯದ ಬಾಗಿಲು ತೆರೆದ ಸುದ್ದಿ ತಿಳಿದ ನಂತರ ಹಿಂದೂ ಧರ್ಮೀಯರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪುರೋಹಿತರನ್ನು ಕರೆಸಿ ದೇವಾಲಯವನ್ನು ಸ್ವಚ್ಛಗೊಳಿಸಲಾಯಿತು. ನಂತರ ದೇವಾಲಯದಲ್ಲಿ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು. ದೇವಾಲಯದ ಭದ್ರತೆಗಾಗಿ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ. ದೇವಾಲಯ ತೆರೆದ ಎರಡನೇ ದಿನವಾದ ಭಾನುವಾರ ಬೆಳಿಗ್ಗೆಯಿಂದಲೇ ಭಕ್ತರು ದೇವಾಲಯಕ್ಕೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ.