ಕರ್ನಾಟಕ

karnataka

ETV Bharat / bharat

ಉತ್ತರಾಖಂಡ್​​ ಟ್ರೆಕ್ಕಿಂಗ್​ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ ಏರಿಕೆ: ಮೃತರೆಲ್ಲರೂ ಬೆಂಗಳೂರು ನಿವಾಸಿಗಳು, 13 ಮಂದಿಯ ರಕ್ಷಣೆ - TREKKING TRAGEDY - TREKKING TRAGEDY

ಸಹಸ್ತ್ರತಾಲ್ ಪರ್ವತಾರೋಹಣಕ್ಕೆ ತೆರಳಿದ್ದ ಕರ್ನಾಟಕದ 19 ಪ್ರವಾಸಿಗರಲ್ಲಿ 9 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಉತ್ತರಾಖಂಡ್​​ ಟ್ರೆಕ್ಕಿಂಗ್​ ದುರಂತ
ಉತ್ತರಾಖಂಡ್​​ ಟ್ರೆಕ್ಕಿಂಗ್​ ದುರಂತ (ETV Bharat)

By ETV Bharat Karnataka Team

Published : Jun 6, 2024, 11:10 AM IST

Updated : Jun 6, 2024, 11:46 AM IST

ಡೆಹ್ರಾಡೂನ್ (ಉತ್ತರಾಖಂಡ):ಇಲ್ಲಿನ ಉತ್ತರಕಾಶಿ-ತೆಹ್ರಿ ಜಿಲ್ಲೆಯ ಗಡಿಯಲ್ಲಿರುವ ಸಹಸ್ತ್ರತಾಲ್ ಪರ್ವತಾರೋಹಣಕ್ಕೆ ತೆರಳಿದ್ದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ನಿನ್ನೆ ಐವರ ಮೃತದೇಹಗಳು ಪತ್ತೆಯಾಗಿದ್ದು, ಇಂದು ನಾಲ್ವರ ಮೃತದೇಹಗಳು ಸಿಕ್ಕಿವೆ. ಮೃತರೆಲ್ಲರೂ ಬೆಂಗಳೂರಿನ ನಿವಾಸಿಗಳೆಂದು ತಿಳಿದು ಬಂದಿದೆ.

ಮೃತರ ಗುರುತು: ಆಶಾ ಸುಧಾಕರ್ (71), ಸಿಂಧೂ (45), ಸುಜಾತಾ (51), ವಿನಾಯಕ (54), ಚಿತ್ರಪರಿಣಿತ (48), ವೆಂಕಟೇಶ್, ಪಿ.ಕೃಷ್ಣಮೂರ್ತಿ, ಅನಿತಾ ರಂಗಪ್ಪ, ಪದ್ಮಿನಿ ಹೆಗಡೆ ಮೃತಪಟ್ಟವರೆಂದು ಗುರುತಿಸಲಾಗಿದೆ. ಮೃತರ ಶವಗಳನ್ನು ಉತ್ತರ ಕಾಶಿಗೆ ರವಾನಿಸಲಾಗಿದೆ.

ಸುರಕ್ಷಿತವಾಗಿರುವವರು: ಬೆಂಗಳೂರಿನ ಗಿರಿ ನಗರ ನಿವಾಸಿ ಜೈ ಪ್ರಕಾಶ್ ವಿಎಸ್ (61), ಹಂಪಿ ನಗರದ ಭರತ್ ವಿ (53), ಜೋಪ್ ನಗರದ ಅನಿಲ್ ಭಟ್ (52), ಮಧು ಕಿರಣ್ ರೆಡ್ಡಿ (52), ಕೆಆರ್ ಪುರಂನ ಶೀನಾ ಲಕ್ಷ್ಮಿ (48), ಸೌಮ್ಯಾ ಕೆ (31), ಹೆಚ್‌ಎಸ್‌ಆರ್ ನಿವಾಸಿ ಶಿವ ಜ್ಯೋತಿ (45), ಪ್ರೆಸ್ಟೀಜ್ ಸಿಟಿಯ ವಿನಾಯಕ್ ಎಂ.ಕೆ (47) (ಪ್ರಸ್ತುತ ಭಟ್ವಾಡಿಯಲ್ಲಿ ಸುರಕ್ಷಿತ), ಎಸ್‌ಆರ್‌ಕೆ ನಗರ ನಿವಾಸಿ ಶ್ರೀರಾಮಲು ಸುಧಾಕರ್ (64), ವಿವೇಕ ಶ್ರೀಧರ್ (37). ಮಹಾರಾಷ್ಟ್ರದ ಸ್ಮೃತಿ ಪ್ರಕಾಶ್ (45).

ರಕ್ಷಣಾ ಕಾರ್ಯ ಪೂರ್ಣ: ಅಪಾಯದಲ್ಲಿ ಸಿಲುಕಿದ್ದ ಚಾರಣಿಗರ ರಕ್ಷಣಾ ಕಾರ್ಯ ಪೂರ್ಣಗೊಂಡಿದೆ. ಎಸ್‌ಡಿಆರ್‌ಎಫ್ ರಕ್ಷಣಾ ತಂಡದ ಕಾರ್ಯಾಚರಣೆಯಲ್ಲಿ 9 ಮೃತದೇಹಗಳು ಸಿಕ್ಕಿವೆ. ಇನ್ನು 13 ಜನರನ್ನು ರಕ್ಷಿಸಲಾಗಿದೆ.

ಕರ್ನಾಟಕದ 19, ಮಹಾರಾಷ್ಟ್ರ ಇಬ್ಬರು ಮತ್ತು ಓರ್ವ ಸ್ಥಳೀಯ ಮಾರ್ಗದರ್ಶಕರು ಸೇರಿ ಒಟ್ಟು 22 ಜನರ ತಂಡ ಪರ್ವತಾರೋಹಣಕ್ಕೆ ತೆರಳಿತ್ತು. ಈ ವೇಳೆ ಹವಾಮಾನ ವೈಪರೀತ್ಯ ಉಂಟಾಗಿ ಅಪಾಯಕ್ಕೆ ಸಿಲುಕಿದ್ದರು. ಇದರಲ್ಲಿ ಕರ್ನಾಟಕದ 9 ಚಾರಣಿಗರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಭಾರಿ ಮಳೆ; 10 ಮಂದಿ ಸಾವು, ಐವರು ನಾಪತ್ತೆ - heavy rains in Sri Lanka

22 ಸದಸ್ಯರ ಟ್ರೆಕ್ಕಿಂಗ್ ತಂಡವು ಮೇ 29ರಂದು ಮನೇರಿಯ ಹಿಮಾಲಯನ್ ವ್ಯೂ ಟ್ರೆಕ್ಕಿಂಗ್ ಏಜೆನ್ಸಿ ಮುಖಾಂತರವಾಗಿ ಮಲ್ಲ-ಸಿಲ್ಲಾ-ಕುಷ್ಕಲ್ಯಾಣ-ಸಹಸ್ತ್ರತಾಲ್​ಗೆ ಟ್ರೆಕ್ಕಿಂಗ್​ಗೆ ತೆರಳಿತ್ತು. ಈ ತಂಡವು ಜೂನ್​ 7ರೊಳಗೆ ಹಿಂತಿರುಗಬೇಕಿತ್ತು. ಟ್ರೆಕ್ಕಿಂಗ್​ ತಂಡ ಮಂಗಳವಾರ ಸಹಸ್ತ್ರತಾಲ್​ಗೆ ಹಿಂತಿರುಗಿದ್ದ ವೇಳೆ ಹಠಾತ್ ಹವಾಮಾನ ಬದಲಾವಣೆ ಆಗಿದೆ. ದಟ್ಟವಾದ ಮಂಜು ಮತ್ತು ಹಿಮಪಾತದ ನಡುವೆ ಸಿಲುಕಿಕೊಂಡಿದ್ದಾರೆ. ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಚಾರಣಿಗರು ಇಡೀ ರಾತ್ರಿ ಚಳಿಯಲ್ಲಿ ಸಿಲುಕಿಕೊಂಡಿದ್ದರು.

ಘಟನೆಯ ಬಗ್ಗೆ ಮಾಹಿತಿ ಪಡೆದ ಎಸ್‌ಡಿಆರ್‌ಎಫ್ ತಂಡ 2 ಗುಂಪುಗಳನ್ನು ರಚಿಸಿಕೊಂಡು ಕಾರ್ಯಾಚರಣೆ ನಡೆಸಿದೆ. ಮೂವರು ಸದಸ್ಯರ ತಂಡವನ್ನು ಡೆಹ್ರಾಡೂನ್‌ನ ಸಹಸ್ತ್ರಧಾರಾ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್​ ಮೂಲಕ ರಕ್ಷಣೆಗಾಗಿ ಕಳುಹಿಸಿತ್ತು. ಈ ತಂಡವು 13 ಜನರನ್ನು ರಕ್ಷಣೆ ಮಾಡಿ ಡೆಹರಾಡೂನ್​ನ ಆಸ್ಪತ್ರೆಗೆ ಸಾಗಿಸಿದೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಿಂದ ಇದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.

ಸಿಎಂ ಧಾಮಿ ಸಂತಾಪ:ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಸಂತಾಪ ಸೂಚಿಸಿದ್ದಾರೆ. "ಚಾರಣದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ 9 ಚಾರಣಿಗರು ಸಾವನ್ನಪ್ಪಿದ ಸುದ್ದಿ ತುಂಬಾ ದುಃಖಕರವಾಗಿದೆ. ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿ 13 ಚಾರಣಿಗರನ್ನು ರಕ್ಷಿಸಲಾಗಿದೆ. ಅಗಲಿದ ಆತ್ಮಗಳಿಗೆ ಶಾಂತಿ ಮತ್ತು ದುಃಖದಲ್ಲಿರುವ ಕುಟುಂಬಗಳಿಗೆ ಈ ಅಪಾರ ನಷ್ಟವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ" ಎಂದು ಸಿಎಂ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಚಾರಣಿಗರ ದುರಂತ ಸಾವು- ನೆರವಿಗೆ ಧಾವಿಸಿದ ಕರ್ನಾಟಕ ಸರ್ಕಾರ: ಮೃತ ದೇಹಗಳನ್ನು ರಾಜ್ಯಕ್ಕೆ ತರಲು ಮತ್ತು ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆ ಹಾಗೂ ಸಹಾಯ ಮಾಡುವ ಉದ್ದೇಶದಿಂದ, ಸಿಎಂ ಸಿದ್ದರಾಮಯ್ಯ ಅವರು ಸಚಿವ ಕೃಷ್ಣ ಬೈರೇಗೌಡ ಅವರನ್ನು ಉತ್ತರಾಖಂಡ್​ಗೆ ಕಳುಹಿಸಿಕೊಟ್ಟಿದ್ದಾರೆ. ಈ ನಡುವೆ ದುರಂತಕ್ಕೆ ಸಂಬಂಧ ಪಟ್ಟಂತೆ ಅವರು ಸಂತಾಪ ಸೂಚಿಸಿದ್ದು, ಎಲ್ಲ ನೆರವು ನೀಡುವುದಾಗಿ ಹೇಳಿದ್ದಾರೆ.

’’ಉತ್ತರಾಖಂಡದ ಶಾಸ್ತ್ರತಾಳ್ ಗೆ ಚಾರಣಕ್ಕೆಂದು ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಸಾವಿಗೀಡಾದವರ ಮೃತದೇಹಗಳನ್ನು ಆದಷ್ಟು ಶೀಘ್ರ ಕುಟುಂಬದವರಿಗೆ ತಲುಪಿಸಲಾಗುವುದು ಮತ್ತು ರಕ್ಷಿಸಲ್ಪಟ್ಟಿರುವ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು. ಇದಕ್ಕಾಗಿ ನಮ್ಮ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿದೆ. ಮೃತರ ಸಂಖ್ಯೆ 9ಕ್ಕೆ ಏರಿದ ಸಂಗತಿ ತಿಳಿದು ಬಹಳ ನೋವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಗಳಿಗೆ ನನ್ನ ಸಾಂತ್ವನಗಳು. ಡೆಹ್ರಾಡೋನ್ ನಲ್ಲಿ ರಕ್ಷಣಾ ಕಾರ್ಯದ ಉಸ್ತುವಾರಿ ನಿರ್ವಹಿಸುತ್ತಿರುವ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಮತ್ತು ರಕ್ಷಿಸಲ್ಪಟ್ಟ ಚಾರಣಿಗರ ಜೊತೆ ದೂರವಾಣಿ ಮೂಲಕ ಮಾತನಾಡಿ, ಧೈರ್ಯ ತುಂಬಿದ್ದೇನೆ. ರಕ್ಷಿಸಲ್ಪಟ್ಟಿರುವ ಎಲ್ಲರನ್ನೂ ಯಾವುದೇ ಅಡಚಣೆ ಆಗದಂತೆ ಸುರಕ್ಷಿತವಾಗಿ ಮನೆಗಳಿಗೆ ಸೇರಿಸಬೇಕು. ಮೃತ ದೇಹಗಳನ್ನು ಕುಟುಂಬದವರಿಗೆ ತಲುಪಿಸುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನು ತುರ್ತಾಗಿ ನಿರ್ವಹಿಸಬೇಕು ಎಂಬ ಸೂಚನೆಯನ್ನು ಕೃಷ್ಣಬೈರೇಗೌಡರಿಗೆ ನೀಡಿದ್ದೇನೆ. ಬಾಕಿ ಉಳಿದಿರುವ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕಾಪಾಡಿ ಕರೆತರುವ ಬಗ್ಗೆ ಸರ್ಕಾರಗಳ ಮಟ್ಟದಲ್ಲಿ ಸಕಲ ಪ್ರಯತ್ನಗಳೂ ನಡೆಯುತ್ತಿವೆ. ಈ ಬಗ್ಗೆ ಯಾರೊಬ್ಬರೂ ಆತಂಕಕ್ಕೆ ಒಳಗಾಗುವುದು ಬೇಡ. ಪ್ರತಿ ಕನ್ನಡಿಗನ ಪ್ರಾಣ ರಕ್ಷಣೆಯೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ’’ ಎಂದು ಸಿಎಂ ಟ್ವೀಟ್​ ಮಾಡಿದ್ದಾರೆ.

ಮಾಜಿ ಸಿಎಂ ಹೆಚ್​​ಡಿಕೆ ಅವರಿಂದಲೂ ಸಂತಾಪ: ’’ಉತ್ತರಾಖಂಡ ರಾಜ್ಯದ ಸಹಸ್ತ್ರ ತಾಲ್ ಚಾರಣಕ್ಕೆ ತೆರಳಿದ್ದ ನಮ್ಮ ರಾಜ್ಯದ 22 ಚಾರಣಿಗರು ಹವಾಮಾನ ವೈಪರೀತ್ಯಕ್ಕೆ ಸಿಲುಕಿ, ಅವರಲ್ಲಿ 9 ಚಾರಣಿಗರು ಸಾವನ್ನಪ್ಪಿರುವ ಘಟನೆ ನನಗೆ ತೀವ್ರ ಆಘಾತ ಉಂಟು ಮಾಡಿದೆ. ಸಾಹಸ ಪ್ರವೃತ್ತಿಯ ಚಾರಣಿಗರು ಇಂಥ ಅಪಾಯದ ಸ್ಥಿತಿಗೆ ಸಿಲುಕಿದ್ದು ದುರ್ದೈವದ ಸಂಗತಿ. ಇನ್ನೂ ಹಲವರು ಕಣ್ಮರೆಯಾಗಿದ್ದು, ಅವರೆಲ್ಲರೂ ಕ್ಷೇಮವಾಗಿ ಮರಳಿಬರಲಿ ಎಂದು ಪ್ರಾರ್ಥಿಸುತ್ತೇನೆ. ಜೀವ ಕಳೆದುಕೊಂಡ ಎಲ್ಲಾ ಚಾರಣಿಗರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ‘‘ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಕಾ.ಪು.ಸಿದ್ದಲಿಂಗ ಸ್ವಾಮಿ ನಿಧನ - BSY closest Siddalinga Swamy passed away

Last Updated : Jun 6, 2024, 11:46 AM IST

ABOUT THE AUTHOR

...view details