ನವದೆಹಲಿ: ಭಾರತ ನೆರವಿನೊಂದಿಗೆ ಮಾಲ್ಡೀವ್ಸ್ನಲ್ಲಿ ನಿರ್ಮಿಸಲಾಗಿರುವ ಹೊಸ ರನ್ವೇ ಮತ್ತು ದ್ವೀಪರಾಷ್ಟ್ರದಲ್ಲಿ ರುಪೇ ಕಾರ್ಡ್ ವಹಿವಾಟಿಗೆ ಇಂದು ಪ್ರಧಾನಿ ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಚಾಲನೆ ನೀಡಿದರು. ಈ ಮೂಲಕ ಎರಡು ದೇಶಗಳ ನಡುವಿನ ಆರ್ಥಿಕ ಸಂಬಂಧ ಮತ್ತು ಪ್ರವಾಸೋದ್ಯಮ ಸಹಕಾರ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.
ಮಾಲ್ಡೀವ್ಸ್ನ ಹನಿಮದೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣ ಮಾಡಲಾಗಿರುವ ರನ್ವೇಗೆ ಉಭಯ ದೇಶದ ನಾಯಕರು ಜಂಟಿಯಾಗಿ ಈ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಜೊತೆಗೆ ಮಾಲ್ಡೀವ್ಸ್ನಲ್ಲಿ ರುಪೇ ಪಾವತಿ ಸೇವೆ ಕಾರ್ಡ್ ಬಳಕೆಯ ವರ್ಗಾವಣೆಗೆ ವೆಬ್ಲಿಂಕ್ ಮೂಲಕ ಚಾಲನೆ ನೀಡಿದರು.
ಭಾರತ ಪ್ರವಾಸದಲ್ಲಿರುವ ಮುಯಿಝು ಜೊತೆಗೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಸಭೆ ನಡೆಸಿದ ಬಳಿಕ, ಈ ಕಾರ್ಯಕ್ರಮಗಳು ಭವಿಷ್ಯದ ಹೊಸ ಮಾರ್ಗವನ್ನು ರೂಪಿಸಲಿವೆ ಎಂದು ಎರಡು ದೇಶದ ನಾಯಕರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.
ಭಾನುವಾರ ಸಂಜೆ ಮಾಲ್ಡೀವ್ಸ್ ಅಧ್ಯಕ್ಷರು ದೇಶದ ಮೊದಲ ಮಹಿಳೆ ಸಾಜಿದಾ ಮೊಹಮ್ಮದ್ ಅವರು ಮಾಲ್ಡೀವ್ಸ್ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ.
ಕಳೆದ ಜೂನ್ನಲ್ಲಿ ಪ್ರಧಾನಿ ಮೋದಿ ಅವರ ಪ್ರಮಾಣವಚನ ಕಾರ್ಯಕ್ರಮದ ಬಳಿಕ ಮಾಲ್ಡೀವ್ಸ್ ಅಧ್ಯಕ್ಷರ ಈ ವರ್ಷದ ಎರಡನೇ ಭೇಟಿ ಆಗಿದೆ. ಕಾರ್ಯಕ್ರಮದ ಬಿಡುಗಡೆಗೆ ಮುನ್ನ ಭಾರತದ ಸಹಾಯದಿಂದ ನಿರ್ಮಾಣವಾಗಿರುವ ರನ್ವೇ ಯೋಜನೆ ಕುರಿತ ಸಣ್ಣ ಅಧಿಕೃತ ವಿಡಿಯೋವನ್ನು ಹಂಚಿಕೊಂಡರು.
ಭಾರತ ಮತ್ತು ಮಾಲ್ಡೀವ್ಸ್ನ ನಡುವೆ ಶತಮಾನದ ಬಾಂಧವ್ಯ ಮತ್ತು ಸಂಸ್ಕೃತಿ ಬದಲಾವಣೆ ವಿಸ್ತರಣೆ ಕಂಡಿದೆ. ಪರಸ್ಪರ ಗೌರವ ಮತ್ತು ಅಗಾಧ ಬೆಂಬಲದಿಂದಾಗಿ ಈ ಸಂಬಂಧಗಳು ವಿಕಸಗೊಂಡಿವೆ ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ.
ಮಾಲ್ಡೀವ್ಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವೂ ಸದಾ ಮೊದಲಿಗೆ ಬೆಂಬಲಕ್ಕೆ ನಿಂತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ನಾಯಕತ್ವದ ಅಡಿಯಲ್ಲಿ ನಮ್ಮ ಸಂಬಂಧವೂ ಅಗಾಧ ಎತ್ತರ ಸಾಧಿಸಿದೆ ಎಂದಿದ್ದಾರೆ.
ರುಪೇ ಕಾರ್ಡ್ ಬಿಡುಗಡೆಯುಂದಾಗಿ ಭಾರತ- ಮಾಲ್ಡೀವ್ಸ್ ಸಂಬಂಧಗಳು ಪ್ರವಾಸೋದ್ಯಮ ವೃದ್ಧಿ ಮತ್ತು ಆರ್ಥಿಕ ಸಹಕಾರ ಬಲಗೊಳ್ಳಲಿದೆ. ಇದರಿಂದ ಭಾರತದ ಪ್ರವಾಸಿಗರು ನಗದುರಹಿತ ವಹಿವಾಟವನ್ನು ಸುಲಭವಾಗಿ ನಡೆಸಬಹುದಾಗಿದೆ. ಇದು ವೆಚ್ಚ ಕಡಿಮೆ ಮಾಡಿ, ಪ್ರವಾಸಿಗರ ಅನೂಕುಲತೆ ಹೆಚ್ಚಿಸಲಿದೆ. ಇದರಿಂದ ಮಾಲ್ಡೀವ್ಸ್ ಪ್ರವಾಸೋದ್ಯಮ ವೃದ್ಧಿಗೆ ಸಹಕಾರವಾಗಲಿದೆ ಎಂದರು.
ಇದನ್ನೂ ಓದಿ: ಮಾಲ್ಡೀವ್ಸ್ ಅಧ್ಯಕ್ಷರಿಗೆ ಆತ್ಮೀಯ ಸ್ವಾಗತ ಕೋರಿದ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ