ಕರ್ನಾಟಕ

karnataka

ಆಂಧ್ರದಲ್ಲಿ ಪ್ರವಾಹದಿಂದ 10 ಲಕ್ಷ ಜನರಿಗೆ ಸಂಕಷ್ಟ, 1200 ಕೋಟಿ ರೂ. ಹಾನಿ: ಕೇಂದ್ರ ತಂಡದಿಂದ ಪರಿಶೀಲನೆ - Andhra Pradesh Flood

By ETV Bharat Karnataka Team

Published : Sep 12, 2024, 4:59 PM IST

ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ 1200 ಕೋಟಿ ರೂ. ಮೊತ್ತದ ಆಸ್ತಿ ಪಾಸ್ತಿ ನಾಶವಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೇಂದ್ರ ತಂಡದಿಂದ ಪರಿಶೀಲನೆ
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೇಂದ್ರ ತಂಡದಿಂದ ಪರಿಶೀಲನೆ (ETV Bharat)

ವಿಜಯವಾಡ: ಆಂಧ್ರಪ್ರದೇಶದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಕೇಂದ್ರದ ಅಂತರ್​ ಸಚಿವಾಲಯದ ತಂಡವು ಎರಡನೇ ದಿನವಾದ ಗುರುವಾರವೂ ಭೇಟಿ ಮುಂದುವರಿಸಿದೆ.

ಇತ್ತೀಚಿನ ಭಾರಿ ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿಯನ್ನು ನಿರ್ಣಯಿಸಲು ತಂಡವು ಗುರುವಾರ ಎನ್​ಟಿಆರ್ ಮತ್ತು ಗುಂಟೂರು ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಈ ಎರಡು ಜಿಲ್ಲೆಗಳ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ತಂಡವು ಎರಡು ಗುಂಪುಗಳಾಗಿ ವಿಭಜನೆಯಾಗಲಿದೆ. ಎರಡು ದಿನಗಳ ರಾಜ್ಯ ಭೇಟಿಯ ಮೊದಲ ದಿನವಾದ ಬುಧವಾರ ತಂಡವು ಕೃಷ್ಣ ಮತ್ತು ಬಾಪಟ್ಲಾ ಜಿಲ್ಲೆಗಳಿಗೆ ಭೇಟಿ ನೀಡಿತ್ತು.

ಕೇಂದ್ರ ತಂಡಕ್ಕೆ ವಿವರಣೆ ನೀಡಿದ ಡಿಸಿ:ಕೃಷ್ಣ ಜಿಲ್ಲಾಧಿಕಾರಿ ಡಿ.ಕೆ.ಬಾಲಾಜಿ ಅವರು ಭಾರಿ ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿಯ ಬಗ್ಗೆ ಕೇಂದ್ರ ತಂಡಕ್ಕೆ ವಿವರಣೆ ನೀಡಿದರು. ಕೃಷಿ ಮತ್ತು ಸಂಬಂಧಿತ ವಲಯಗಳು, ಹೆದ್ದಾರಿ, ನೀರಾವರಿ, ವಿದ್ಯುತ್ ಮತ್ತು ಗ್ರಾಮೀಣ ನೀರು ಸರಬರಾಜು ಇಲಾಖೆಗಳು 1,200 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ತಂಡವು ಖುದ್ದಾಗಿ ಜಿಲ್ಲಾಧಿಕಾರಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಭೇಟಿಯಾಗಿ ವಿವಿಧ ವಲಯಗಳಿಗೆ ಉಂಟಾದ ನಷ್ಟದ ಬಗ್ಗೆ ಮಾಹಿತಿ ಪಡೆದುಕೊಂಡಿತು.

ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಅನಿಲ್ ಸುಬ್ರಮಣ್ಯಂ ನೇತೃತ್ವದ ಈ ತಂಡದಲ್ಲಿ ವಿಜಯವಾಡದ ಪ್ರಾದೇಶಿಕ ಕಚೇರಿಯ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮುಖ್ಯ ಎಂಜಿನಿಯರ್ ರಾಕೇಶ್ ಕುಮಾರ್ ಮತ್ತು ಬಾಹ್ಯಾಕಾಶ ಇಲಾಖೆಯ ಇಸ್ರೋದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರದ ವಿಜ್ಞಾನಿ ಎಸ್​ವಿಎಸ್​ಪಿ ಶರ್ಮಾ ಇದ್ದರು.

ಜಿಲ್ಲಾಧಿಕಾರಿಗಳಿಂದ ಪವರ್​ ಪಾಯಿಂಟ್​ ಪ್ರಸ್ತುತಿ:ಜಿಲ್ಲಾಧಿಕಾರಿಗಳು ಪವರ್ ಪಾಯಿಂಟ್ ಪ್ರಸ್ತುತಿಯ ಮೂಲಕ ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿಯನ್ನು ವಿವರಿಸಿದರು. ಭಾರೀ ಮಳೆ, ಮೇಲ್ಭಾಗದಿಂದ ಕೃಷ್ಣಾ ನದಿಗೆ ಭಾರಿ ಒಳಹರಿವು, ಬುಡಮೇರು ಹೊಳೆ ಉಕ್ಕಿ ಹರಿದಿದ್ದು ಮತ್ತು ಬಿರುಕುಗಳ ಕಾರಣದಿಂದ ಭಾರಿ ಪ್ರಮಾಣದ ಹಾನಿಯಾಗಿದೆ ಎಂದು ಅವರು ಹೇಳಿದರು. 2024 ರ ಸೆಪ್ಟೆಂಬರ್​ನಲ್ಲಿ ಕೃಷ್ಣಾ ನದಿಯಲ್ಲಿ 11.43 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿರುವುದು ಇತಿಹಾಸದಲ್ಲೇ ಅತಿ ಹೆಚ್ಚು ಎಂದು ಕೇಂದ್ರ ತಂಡಕ್ಕೆ ಮಾಹಿತಿ ನೀಡಲಾಯಿತು.

ಕೃಷ್ಣಾ ನದಿಗೆ 2009ರಲ್ಲಿ 10.94 ಲಕ್ಷ ಕ್ಯೂಸೆಕ್ ಹಾಗೂ 1903ರಲ್ಲಿ 10.61 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿತ್ತು. ಎನ್ ಟಿಆರ್ ಜಿಲ್ಲೆಯಲ್ಲಿ ವಿನಾಶ ಉಂಟುಮಾಡಿದ ಬುಡಮೇರು ನದಿಯು ಕೃಷ್ಣ ಜಿಲ್ಲೆಯಲ್ಲಿ 56 ಕಿಲೋಮೀಟರ್ ಉದ್ದಕ್ಕೆ ಹರಿಯುತ್ತದೆ ಎಂದು ಕೇಂದ್ರ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ನದಿಗೆ 45,000 ಕ್ಯೂಸೆಕ್ ನೀರು ಹರಿದು ಬಂದಿದ್ದು, ತಗ್ಗು ಪ್ರದೇಶಗಳು ಮುಳುಗಿ ಬೆಳೆಗಳು ಜಲಾವೃತವಾಗಿವೆ.

ಇದನ್ನೂ ಓದಿ : ಗುಜರಾತ್​ನಲ್ಲಿ ಭಾರಿ ಮಳೆ: ಸರ್ದಾರ್ ಸರೋವರ್ ಅಣೆಕಟ್ಟೆಯಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ - SARDAR SAROVAR DAM

ABOUT THE AUTHOR

...view details