ಅಮರಾವತಿ(ಆಂಧ್ರಪ್ರದೇಶ): ತಿರುಮಲ ತಿರುಪತಿ ದೇವಸ್ಥಾನದಲ್ಲಿ ಲಡ್ಡು ಕಲಬೆರಕೆಯನ್ನು ಆಂಧ್ರಪ್ರದೇಶ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಇಂದು ತಿರುಮಲ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟದ ಲೋಪ ಮತ್ತು ಕಲಬೆರಕೆ ಪದಾರ್ಥ ಬಳಕೆ ಸಂಬಂಧ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಲಡ್ಡು ತಯಾರಿಕೆಯಲ್ಲಿ ಆಗಿರುವ ತಪ್ಪುಗಳ ಕುರಿತು ಸಂಜೆಯೊಳಗೆ ಸಮಗ್ರ ವರದಿ ನೀಡುವಂತೆ ಟಿಟಿಡಿ ಇಒಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ.
ತಿರುಮಲದ ಪಾವಿತ್ರ್ಯತೆ ಕಾಪಾಡಲು ಬದ್ಧ ಎಂದ ನಾಯ್ಡು: ಬಳಿಕ ಮಾತನಾಡಿದ ಸಿಎಂ ಚಂದ್ರಬಾಬು ನಾಯ್ಡು, "ತಿರುಮಲದ ಪಾವಿತ್ರ್ಯತೆ ಕಾಪಾಡುವ ಕುರಿತು ಆಗಮ, ವೈದಿಕ ಮತ್ತು ಧಾರ್ವಿುಕ ಪರಿಷತ್ತಿನ ಜತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಭಕ್ತರ ನಂಬಿಕೆ ಹಾಗೂ ದೇವಸ್ಥಾನದ ಸಾಂಪ್ರದಾಯಗಳನ್ನು ಉಳಿಸಲಾಗುವುದು. ಶ್ರೀವಾರಿ ದೇವಸ್ಥಾನದ ಪ್ರತಿಷ್ಠೆಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದರು.
ಮುಖ್ಯ ಕಾರ್ಯದರ್ಶಿ ನಿರಬ್ ಕುಮಾರ್ ಪ್ರಸಾದ್, ಸಚಿವರಾದ ಆನಂ ರಾಮನಾರಾಯಣ ರೆಡ್ಡಿ, ನಿಮ್ಮಾ ರಾಮಾನಾಯ್ಡು, ಅನಾನಿ ಸತ್ಯಪ್ರಸಾದ್, ಕೊಲ್ಲು ರವೀಂದ್ರ, ಕೊಲುಸು ಪಾರ್ಥಸಾರಥಿ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ವರದಿ ಕೇಳಿದ ಕೇಂದ್ರ ಆರೋಗ್ಯ ಇಲಾಖೆ; ಇದಕ್ಕೂ ಮೊದಲು ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪದ ಬಳಕೆ ಕುರಿತು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಸಿಎಂ ಚಂದ್ರಬಾಬು ನಾಯ್ಡು ಜೊತೆ ಮಾತನಾಡಿ ಮಾಹಿತಿ ಪಡೆದು, ಈ ಬಗ್ಗೆ ವರದಿ ನೀಡುವಂತೆ ತಿಳಿಸಿದರು.
ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿ, "ಇದು ಬಹಳ ಗಂಭೀರವಾದ ವಿಚಾರ ಎಂದು ಸಿಎಂ ಚಂದ್ರಬಾಬು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಲಡ್ಡು ಕಲಬೆರಕೆ ವಿಚಾರ ಕಳವಳಕಾರಿಯಾಗಿದ್ದು, ಇದು ಭಕ್ತರ ಭಾವನೆಗಳಿಗೆ ಸಂಬಂಧಿಸಿದೆ" ಎಂದು ಹೇಳಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, "ಜಗನ್ ಮತ್ತು ಕೋ ತಿರುಮಲ ಕಾಲೇಜುಗಳಿಂದ ಶ್ರೀನಿವಾಸ ಮತ್ತು ಪದ್ಮಾವತಿಯ ಫೋಟೋಗಳನ್ನು ತೆರವುಗೊಳಿಸಲು. ತಿರುಮಲದಲ್ಲಿ ಹಿಂದೂಯೇತರ ಚಿಹ್ನೆಗಳನ್ನು ಇರಿಸಲು ಪ್ರಯತ್ನಿಸಿದ್ದರು. ಹಿಂದೂಯೇತರರನ್ನು ಟಿಟಿಡಿ ಅಧ್ಯಕ್ಷರನ್ನಾಗಿ ನೇಮಿಸಿದರು ಮತ್ತು ಪವಿತ್ರ ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬನ್ನು ಸೇರಿಸಿದರು. ಕ್ಷಮಿಸಿ, ವೆಂಕಟೇಶ್ವರ ದೇವರೇ - ನಮ್ಮ ಸುತ್ತಲಿನ ಈ ಹಿಂದೂ ವಿರೋಧಿ ರಾಜಕಾರಣಕ್ಕಾಗಿ!" ಎಂದಿದ್ದಾರೆ.
ಇದನ್ನೂ ಓದಿ: ಹಿಂದಿನ ಸರ್ಕಾರದಲ್ಲಿ ತಿರುಮಲ ಅಪವಿತ್ರ, ಈಗ ಪವಿತ್ರೀಕರಣ ಆರಂಭ: ಆಂಧ್ರ ಸಿಎಂ ನಾಯ್ಡು - Tirumala Temple